ಕಲಿತ ವಿದ್ಯೆ ಉತ್ತಮ ಕಾರ್ಯಕ್ಕೆ ಬಳಸಿ: ರಾಮಚಂದ್ರ ನಾಯ್ಕ

| Published : Jun 18 2024, 12:49 AM IST

ಸಾರಾಂಶ

ವಿದ್ಯೆಯು ಯಾರ ಸೊತ್ತಲ್ಲ. ವಿದ್ಯೆಯನ್ನು ಕಷ್ಟಪಟ್ಟು ಪಡೆದರೆ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ.

ಭಟ್ಕಳ: ಕಲಿತ ವಿದ್ಯೆಯನ್ನು ಉತ್ತಮ ಕಾರ್ಯಕ್ಕೆ ಬಳಸಿ, ಉತ್ತಮ ಪ್ರಜೆಯಾಗಿ ಊರಿಗೆ ಉಪಕಾರಿಯಾಗುವ ಗುಣ ಬೆಳೆಸಿಕೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾ ನಾಮಧಾರಿ ಸಮಾಜ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ರಾಮಚಂದ್ರ ನಾಯ್ಕ ತಿಳಿಸಿದರು.

ಶಿರಾಲಿಯ ಸಾರದಹೊಳೆಯ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ವೆಂಕಟೇಶ್ವರ ವಿದ್ಯಾವರ್ಧಕ ಸಂಸ್ಥೆಯ 11ನೇ ವರ್ಷದ ಪಠ್ಯ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯೆಯು ಯಾರ ಸೊತ್ತಲ್ಲ. ವಿದ್ಯೆಯನ್ನು ಕಷ್ಟಪಟ್ಟು ಪಡೆದರೆ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.

ಹಳೆಕೋಟೆ ಹನುಮಂತದ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಉನ್ನತ ಹುದ್ದೆ ಪಡೆಯುವಂತಾಗಬೇಕು. ಓದಿ ಉನ್ನತ ಹುದ್ದೆ ಪಡೆದ ಮೇಲೆ ತಮ್ಮ ಪಾಲಕರು, ಸಮಾಜವನ್ನು ಎಂದಿಗೂ ಮರೆಯಬಾರದು. ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಿ ಎಂದರು.

ಜಿಲ್ಲಾ ವಿಶ್ರಾಂತ ನ್ಯಾಯಾಧೀಶ ರವಿ ಎಂ. ನಾಯ್ಕ ಮಾತನಾಡಿ, ಸಮಾಜದ ಕಾರ್ಯಕ್ರಮ ಮಾಡಬೇಕಾದರೆ ಅದರ ಹಿಂದೆ ಬಹಳಷ್ಟು ಶ್ರಮ ಇರುತ್ತದೆ. ಶ್ರಮಕ್ಕೆ ಪ್ರತಿಫಲವಾಗಿ ವಿದ್ಯಾರ್ಥಿಗಳು ಉತ್ತಮ ವಿದ್ಯೆ ಪಡೆದು ಉನ್ನತ ಸ್ಥಾನ ಹೊಂದಿ ಸಮಾಜಕ್ಕೆ ಹೆಸರು ತರುವಂತಾಗಲಿ ಎಂದು ಹಾರೈಸಿದರು. ಹೋಟೆಲ್ ಉದ್ಯಮಿ ಮಂಜುನಾಥ ನಾಯ್ಕ, ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ಆರ್. ನಾಯ್ಕ ಮಾತನಾಡಿದರು. ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮನಮೋಹನ ನಾಯ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ರಾಜ್ಯಕ್ಕೆ ೯ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಶ್ರೇಯಸ್ ರವಿ ನಾಯ್ಕ ಈತನನ್ನು ಪಾಲಕರೊಂದಿಗೆ ಸನ್ಮಾನಿಸಲಾಯಿತು. ಶಿಕ್ಷಣ ಪ್ರೇಮಿಗಳ ಸಂಘದ ರಾಘವೇಂದ್ರ ನಾಯ್ಕ, ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ಆರ್. ನಾಯ್ಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.೩೦೦ಕ್ಕೂ ಅಧಿಕ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕವನ್ನು ವಿತರಿಸಲಾಯಿತು. ಮಂಜುನಾಥ ನಾಯ್ಕ ಪ್ರಾರ್ಥನೆ ಹಾಡಿದರು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಜಗದೀಶ ನಾಯ್ಕ ಸ್ವಾಗತಿಸಿ, ವರದಿ ವಾಚನ ಮಾಡಿದರು. ಗಂಗಾಧರ ನಾಯ್ಕ, ನಾರಾಯಣ ನಾಯ್ಕ ಹಾಗೂ ಪರಮೇಶ್ವರ ನಾಯ್ಕ, ಕಾರ್ಯಕ್ರಮ ನಿರೂಪಿಸಿದರು. ದೇವೇಂದ್ರ ನಾಯ್ಕ ವಂದಿಸಿದರು.