ಬದುಕಿನ ಯಶಸ್ಸಿಗೆ ಜೀವನ ಕೌಶಲ್ಯ ಸದ್ಬಳಕೆ ಮಾಡಿಕೊಳ್ಳಲಿ

| Published : Jun 26 2024, 12:33 AM IST

ಸಾರಾಂಶ

ಬದುಕಿನ ಯಶಸ್ಸಿಗೆ ಜೀವನ ಕೌಶಲ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪರಿಶ್ರಮದಿಂದ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ ಎಂದು ಲೋಯಲಾ ವಿಕಾಸ ಕೇಂದ್ರ ಸಂಸ್ಥೆಯ ನಿರ್ದೇಶಕ ಜೆಸಸ್ ತಿಳಿಸಿದರು.

ಹಾನಗಲ್ಲ: ಬದುಕಿನ ಯಶಸ್ಸಿಗೆ ಜೀವನ ಕೌಶಲ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪರಿಶ್ರಮದಿಂದ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ ಎಂದು ಲೋಯಲಾ ವಿಕಾಸ ಕೇಂದ್ರ ಸಂಸ್ಥೆಯ ನಿರ್ದೇಶಕ ಜೆಸಸ್ ತಿಳಿಸಿದರು.

ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಯುವಜನರಿಗಾಗಿ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯುವಜನರ ಸಾಮರ್ಥ್ಯ ವ್ಯಯವಾಗಬಾರದು. ಸಮಾಜದಲ್ಲಿ ಯುವಕರಿಗೆ ಇರುವ ಪ್ರಾಧಾನ್ಯತೆಯನ್ನು ಅರಿಯಬೇಕು. ಈಗ ಗಳಿಸಿದ ವಿದ್ಯೆ ಬದುಕಿನಲ್ಲಿ ಉತ್ತಮ ಜೀವನಕ್ಕೆ ದಾರಿಯಾಗುತ್ತದೆ. ಜೀವನ ಕೌಶಲ್ಯಗಳನ್ನು ಬೆಳೆಸಿಕೊಂಡು ಬದುಕು ಹಸನು ಮಾಡಿಕೊಳ್ಳಲು ಮುಂದಾಗಿ. ವೈಯಕ್ತಿಕ ಹಿತಾಸಕ್ತಿಗಳ ಜೊತೆಗೆ ಸಮುದಾಯದ ಹಿತಕ್ಕೆ ನಿಮ್ಮ ಶ್ರಮ ಸಾರ್ಥಕವಾಗಲಿ ಎಂದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರೈತ ಸಂಘದ ಮುಖಂಡ ಶಂಕರ ಕಳಸದ, ವಿದ್ಯೆಯೊಂದಿಗೆ ವಿನಯ ಬೇಕು. ನಮ್ಮ ಬುದ್ಧಿವಂತಿಕೆ ಶ್ರಮ ವ್ಯರ್ಥವಾಗಬಾರದು. ಕಾಲ ಹರಣ ಸಲ್ಲದು. ಎಲ್ಲದರಲ್ಲೂ ಸೋಲಿನ ಭಯ ಬೇಡ, ಗೆಲ್ಲುವ ವಿಶ್ವಾಸವಿರಲಿ. ಅದಕ್ಕಾಗಿ ಬೇಕಾಗುವ ಶ್ರಮ ಹಾಕಲು ಮುಂದಾಗಿರಿ. ಎಲ್ಲ ಕಾಲದಲ್ಲಿಯೂ ಸ್ಪರ್ಧೆ ಇದೆ. ಎಲ್ಲ ಸ್ಪರ್ಧೆಗಳನ್ನು ಗೆದ್ದು ವಿಜಯಿಯಾಗುವ ಇಚ್ಛಾಶಕ್ತಿ ಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಪೃಥ್ವಿ ಮಾತನಾಡಿ, ಬದುಕಿನಲ್ಲಿ ಧೈರ್ಯ, ಸವಾಲುಗಳನ್ನು ಎದುರಿಸುವ ಇಚ್ಛಾಶಕ್ತಿ ಯುವಕರಿಗೆ ಬೇಕು. ಸಮಸ್ಯೆಗಳನ್ನು ಜಾಣ್ಮೆಯಿಂದ ಪರಿಹರಿಸಿಕೊಳ್ಳಬೇಕು. ಏಳು ಬೀಳುಗಳು ಅಡೆ ತಡೆಗಳು ಸಹಜ. ಆದರೆ, ಎದೆಗುಂದದೇ ಎಲ್ಲವನ್ನೂ ಗೆದ್ದು ಯಶ ಕಾಣಬೇಕು. ಕೀಳರಿಮೆ ಬಿಟ್ಟು, ಶಿಸ್ತು ಸಮಯ ಪಾಲನೆಯಲ್ಲಿ ವಿಶ್ವಾಸವಿಟ್ಟು ಮುನ್ನಡೆಯಬೇಕು. ಸರಿಯಾದ ಗುರಿ ಇರಲಿ. ಅದಕ್ಕಾಗಿ ನಿರಂತರ ಪರಿಶ್ರಮವಿರಲಿ ಎಂದು ಸಲಹೆ ನೀಡಿದರು.

ಅರುಣ ಬೈಲವಾಳ ಸ್ವಾಗತಿಸಿದರು. ಫಕ್ಕೀರೇಶ ಗೌಡಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪೀರಪ್ಪ ಸಿರಸಿ ವಂದಿಸಿದರು.