ಸಮೂಹ ಸಾರಿಗೆ, ವಿದ್ಯುತ್‌ ಚಾಲಿತ ವಾಹನ ಬಳಕೆ ಮಾಡಿ

| Published : Nov 06 2025, 02:30 AM IST

ಸಮೂಹ ಸಾರಿಗೆ, ವಿದ್ಯುತ್‌ ಚಾಲಿತ ವಾಹನ ಬಳಕೆ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಾಹನಗಳ ಸಂಚಾರ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ವಾಹನಗಳು ಹೊರಸೂಸುವ ಅನಿಲವು ಶುದ್ಧಗಾಳಿಯನ್ನು ವಿಷಕಾರಿಯನ್ನಾಗಿ ಮಾಡುತ್ತಿದೆ.

ಕೊಪ್ಪಳ: ಹೆಚ್ಚಿನ ಸಂಖ್ಯೆಯ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯ ತಡೆಗೆ ಸಮೂಹ ಸಾರಿಗೆ ಮತ್ತು ವಿದ್ಯುತ್ ಚಾಲಿತ ವಾಹನಗಳ ಬಳಕೆ ಮಾಡುವಂತೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಹೇಳಿದರು.

ಅವರು ಮಂಗಳವಾರ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರಿಗೆ ಇಲಾಖೆಯಿಂದ ಹಮ್ಮಿಕೊಂಡಿದ್ದ ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾಹನಗಳ ಸಂಚಾರ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ವಾಹನಗಳು ಹೊರಸೂಸುವ ಅನಿಲವು ಶುದ್ಧಗಾಳಿಯನ್ನು ವಿಷಕಾರಿಯನ್ನಾಗಿ ಮಾಡುತ್ತಿದೆ. ವಾಹನಗಳು ಹೊರಸೂಸುವ ವಿಷಕಾರಿ ಅನಿಲಗಳಿಂದ ಮಾನವನ ಆರೋಗ್ಯದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮಗಳು ಉಂಟಾಗುತ್ತಿವೆ. ಆದ್ದರಿಂದ ವಾಹನ ಮಾಲೀಕರು ಪ್ರತಿ ಆರು ತಿಂಗಳಿಗೊಮ್ಮೆ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಿಸಿ ವಾಹನದಿಂದ ವಾಯುಮಾಲಿನ್ಯ ಆಗುತ್ತಿಲ್ಲ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸಮೀಪದ ಪ್ರದೇಶಗಳಲ್ಲಿ ಹೋಗಿ ಬರಲು ಬೈಸಿಕಲ್ ಬಳಸಬೇಕು. ಎಲೆಕ್ಟ್ರಿಕ್ ವಾಹನ ಖರೀದಿಸಿ ಬಳಕೆ ಮಾಡಬಹುದು ಎಂದರು.

ವಾಹನಗಳಿಗೆ ಕಲಬೆರಕೆ ಇಂಧನ ಮತ್ತು ಕಡಿಮೆ ದರ್ಜೆಯ ಕಳಪೆ ಇಂಜಿನ್ ಆಯಿಲ್ ಉಪಯೋಗಿಸಬಾರದು. ಕಪ್ಪು ಮತ್ತು ದಟ್ಟವಾದ ಹೊಗೆ ಬರುತ್ತಿದ್ದರೆ ತಕ್ಷಣ ಅಧಿಕೃತ ಮಾರಾಟಗಾರರು ಅಥವಾ ಸರ್ವೀಸಿಂಗ್ ಸೆಂಟರ್‌ಗಳಲ್ಲಿ ವಾಹನ ದುರಸ್ತಿ ಮಾಡಿಸಬೇಕು. ಸೈಲೆನ್ಸರ್‌ಗಳಲ್ಲಿ ಟ್ಯಾಂಪರ್ ಮಾಡಬೇಡಿ ಹಾಗೂ ಕರ್ಕಶ ಶಬ್ದಗಳು ಬರದಂತೆ ನೋಡಿಕೊಳ್ಳಬೇಕು. ವಾಹನದ ಏರ್ ಫಿಲ್ಟರ್ ಮತ್ತು ಸ್ಪಾರ್ಕ್ ಪ್ಲಗ್‌ ಸ್ವಚ್ಛವಾಗಿಟ್ಟುಕೊಳ್ಳಬೇಕು. ವಾಹನಗಳಿಂದ ಹೊಗೆ ಸೂಸುವ ಪ್ರಮಾಣ ನಿಯಂತ್ರಣದಲ್ಲಿಡಲು ತಮ್ಮ ವಾಹನಗಳನ್ನು ಸದಾ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಪರಿಸರದ ರಕ್ಷಣೆಗಾಗಿ ಗಿಡಗಳನ್ನು ನೆಡಬೇಕು. ತಿಂಗಳಾದ್ಯಂತ ಜರುಗುವ ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಸಾರ್ವಜನಿಕರು ಸಹಕರಿಸುವಂತೆ ತಿಳಿಸಿದರು.

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಚನ್ನಬಸವ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ವಾಯು ಮಾಲಿನ್ಯದಿಂದ ಮಾನವನ ಆರೋಗ್ಯದ ಮೇಲೆ ಹಾಗೂ ಪರಿಸರದ ಮೇಲೆ ಆಗುವ ಹಾನಿಗಳ ಬಗ್ಗೆ ತಿಳಿಸಿ ನಿಯಂತ್ರಿಸುವ ಕ್ರಮದ ಬಗ್ಗೆ ವಿವರಿಸಿದರು.

ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಜಿ.ಎಂ. ಸುರೇಶ ವಾಹನ ಸುಸ್ಥಿತಿಯಲ್ಲಿಟ್ಟುಕೊಳ್ಳುವ ಬಗ್ಗೆ ಹಾಗೂ ನಿಯಮಿತವಾಗಿ ವಾಹನದ ಮಾಲಿನ್ಯ ತಪಾಸಣೆ ಮಾಡಿಸುವ ಬಗ್ಗೆ ವಿವರಣೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಎನ್. ಪ್ರಭಾಕರ್ ಮತ್ತು ವಿನಾಯಕ್ ನಾಯಕ್, ಮೋಟಾರು ವಾಹನ ನಿರೀಕ್ಷಕ ವಿಜೇಂದ್ರ ಢವಳಗಿ, ಕಚೇರಿ ಅಧೀಕ್ಷಕ ಎನ್. ನಾಗೇಶಕುಮಾರ ಸೇರಿದಂತೆ ಇತರೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.