ಮೀನುಗಾರಿಕೆ, ಮತ್ಸ್ಯೋದ್ಯಮದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ

| Published : Jan 09 2024, 02:00 AM IST

ಸಾರಾಂಶ

ಮೀನುಗಾರಿಕೆ ಅತ್ಯಂತ ಲಾಭಾದಾಯಕ. ಈ ವೃತ್ತಿ ಅಷ್ಟೇ ಅಪಾಯಕಾರಿಯೂ ಹೌದು. ಈ ಹಿನ್ನೆಲೆ ಮೀನುಗಾರರು, ಮೀನು ವ್ಯವಹಾರಸ್ಥರು ನೈಪುಣ್ಯತೆ ಜತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಶಿಕಾರಿಪುರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಮೀನುಗಾರಿಕೆ, ಮತ್ಸ್ಯೋದ್ಯಮ ಇತ್ತೀಚಿನ ವರ್ಷದಲ್ಲಿ ಲಾಭದಾಯಕ ವೃತ್ತಿಯಾಗಿವೆ. ಈ ವೃತ್ತಿಯಲ್ಲಿ ನೈಪುಣ್ಯತೆ ಜತೆಗೆ ಆಧುನಿಕ ತಂತ್ರಜ್ಞಾನ ಹಾಗೂ ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದು ಮೀನುಗಾರರು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ತಾಲೂಕಿನ ಮದಗದ ಕೆರೆಯಲ್ಲಿ ಮೀನುಮರಿಗಳ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಶ್ರಮಿಕ ವರ್ಗದ ಮೀನುಗಾರರಾಗಿದ್ದಾರೆ. ವೃತ್ತಿಯಲ್ಲಿ ಪ್ರತಿಯೊಬ್ಬರೂ ನೈಪುಣ್ಯತೆ ಸಾಧಿಸಿ, ಆಧುನಿಕ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರ ಮೀನುಗಾರಿಕೆ ಇಲಾಖೆ ಮೂಲಕ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದು, ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಭೀಕರ ಬರಗಾಲದ ಮಧ್ಯೆಯೂ ತಾಲೂಕಿನ ವೃತ್ತಿಪರ ಮೀನುಗಾರರಿಗೆ ಶಾಶ್ವತ ನೀರಾವರಿ ಯೋಜನೆ ಮೂಲಕ ಕೆರೆಗೆ ನೀರು ತುಂಬಿಸುವ ಕಾರ್ಯ ವರದಾನವಾಗಿದೆ. ಈ ಯೋಜನೆಯಡಿ ಹಲವು ಕೆರೆಗಳಲ್ಲಿ ನೀರು ಸಂಗ್ರಹ ಹೆಚ್ಚಿರುವ ಕಾರಣ ಮೀನುಗಾರಿಕೆಗೆ ತೊಂದರೆಯಾಗಿಲ್ಲ ಎಂದು ತಿಳಿಸಿದರು.

ಮತ್ಸ್ಯೋದ್ಯಮ ದೇಶದ ಕೋಟ್ಯಂತರ ಕುಟುಂಬಕ್ಕೆ ಬದುಕು ನೀಡಿದೆ. ಬರಗಾಲದಿಂದ ರಾಜ್ಯಾದ್ಯಂತ ಮೀನುಗಾರಿಕೆ ವೃತ್ತಿಗೆ ತೊಂದರೆಯಾಗಿದೆ. ಕೆರೆಗಳ ಟೆಂಡರ್ ಗುತ್ತಿಗೆ ಪಡೆದವರು ನೀರಿನ ಕೊರತೆಯಿಂದ ಮೀನುಗಳ ಸಂತಾನೋತ್ಪತ್ತಿ ಕುಂಠಿತವಾಗಿ ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಸೊರಬ ತಾಲೂಕು ಹೆಚ್ಚಿನ ಕೆರೆ ಹೊಂದಿದ ಹೆಗ್ಗಳಿಕೆ ಹೊಂದಿದೆ. ಇದೀಗ ಶಿಕಾರಿಪುರ ತಾಲೂಕು ಸೊರಬ ತಾಲೂಕನ್ನು ಮೀರಿಸಿ ಹೆಚ್ಚು ಕೆರೆಗಳ ಜತೆಗೆ ಬರಗಾಲದಲ್ಲಿ ನೀರಿನ ಸಂಗ್ರಹ ಮೂಲಕ ಗಮನ ಸೆಳೆದಿದೆ. ತಾಲೂಕಿನ ಮೀನುಗಾರರು ಈ ದಿಸೆಯಲ್ಲಿ ಭೀಕರ ಸಮಸ್ಯೆಯಿಂದ ಪಾರಾಗಿದ್ದು, ಶಾಶ್ವತ ನೀರಾವರಿ ಯೋಜನೆಯು ಮೀನುಗಾರರ ವೃತ್ತಿಗೆ ಪೂರಕವಾಗಿದೆ ಎಂದ ಅವರು, ಎಲ್ಲ ವೃತ್ತಿಯಲ್ಲಿ ಸಮಸ್ಯೆ ಸ್ಪರ್ಧೆ ಸಹಜವಾಗಿದೆ. ಇದನ್ನು ಮೀರಿ ಬದುಕುವ ಛಲದಿಂದ ವೃತ್ತಿಯನ್ನು ಕೈಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭ ಸಂಸದರು ಕೇಂದ್ರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಅರ್ಹರಿಗೆ ಮೀನುಗಾರಿಕೆ ಸಲಕರಣೆ ಕಿಟ್, ಫೈಬರ್ ಗ್ಲಾಸ್, ಹರಿಗೋಲುಗಳನ್ನು ವಿತರಿಸಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ರಾಜ್ಯ ಉಗ್ರಾಣ ನಿಗಮ ಮಾಜಿ ಅಧ್ಯಕ್ಷ ಎಚ್.ಟಿ. ಬಳಿಗಾರ್, ಕುಮದ್ವತಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಮೀನುಗಾರಿಕೆ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಪಿ.ರಾಮಯ್ಯ, ಮೀನುಗಾರಿಕೆ ಇಲಾಖೆ ಶಿವಮೊಗ್ಗ ಜಂಟಿ ನಿರ್ದೇಶಕ ಗಿರೀಶ್, ಉಪನಿರ್ದೇಶಕ ಶಿವಕುಮಾರ್, ಸಹಾಯಕ ನಿರ್ದೇಶಕ ಡಾ.ವಿನಯ್, ಗ್ರಾಪಂ ಸದಸ್ಯ ಚನ್ನಪ್ಪ, ಜಮೀರ್ ಅಹ್ಮದ್ ಸಹಿತ ಮೀನುಗಾರರು ಉಪಸ್ಥಿತರಿದ್ದರು.

- - - -8ಕೆಎಸ್.ಕೆಪಿ3:

ಶಿಕಾರಿಪುರ ತಾಲೂಕಿನ ಮದಗದ ಕೆರೆಯಲ್ಲಿ ಮೀನುಮರಿ ಬಿತ್ತನೆ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ ಅರ್ಹ ಫಲಾನುಭವಿಗಳಿಗೆ ಫೈಬರ್ ಗ್ಲಾಸ್, ಹರಿಕೋಲು, ಮೀನುಗಾರಿಕೆ ಸಲಕರಣೆ ಕಿಟ್‌ಗಳನ್ನು ವಿತರಿಸಿದರು.