ಸಾರಾಂಶ
ಸಂಡೂರು: ಸಂಡೂರು ಹೋಬಳಿ ವ್ಯಾಪ್ತಿಯಲ್ಲಿನ ಕೃಷ್ಣಾನಗರ, ಧರ್ಮಾಪುರ, ಯಶವಂತನಗರ, ಸುಶೀಲಾನಗರ ಗ್ರಾಮ ವ್ಯಾಪ್ತಿಯಲ್ಲಿ ಕೆಲವೆಡೆ ಕೃಷಿ ಜಮೀನುಗಳನ್ನು ಅದಿರು ಲಾರಿಗಳ ನಿಲುಗಡೆಗೆ ಬಳಸಲಾಗುತ್ತಿದೆ. ಪ್ರತಿ ಲಾರಿಗೆ ₹೩೦ರಂತೆ ದಿನಕ್ಕೆ ೪೦೦ರಿಂದ ೮೦೦ ಲಾರಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಕೃಷಿ ಜಮೀನುಗಳನ್ನು ಎನ್ಎ ಮಾಡಿಸದೆ ಅನಧಿಕೃತವಾಗಿ ಕೃಷಿಯೇತರ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂದು ಜನಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಸದಸ್ಯ ಶ್ರೀಶೈಲ ಆಲ್ದಳ್ಳಿ ಆರೋಪಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ತಮ್ಮ ಅಹವಾಲನ್ನು ಸಲ್ಲಿಸಿದರು.ಕೃಷಿ ಜಮೀನುಗಳಲ್ಲಿ ಅದಿರು ಸಾಗಣೆ ಲಾರಿಗಳನ್ನು ನಿಲ್ಲಿಸುತ್ತಿರುವುದರಿಂದ ಮತ್ತು ಆ ಸ್ಥಳಗಳಲ್ಲಿ ಲಾರಿಗಳ ಡ್ರೈವರ್, ಕ್ಲೀನರ್‌ಗಳು ಮಲ ಮೂತ್ರ ವಿಸರ್ಜನೆ ಮಾಡುವುದು, ಮದ್ಯದ ಬಾಟಲ್, ನೀರಿನ ಬಾಟಲ್, ಊಟದ ಕ್ಯಾರಿಬ್ಯಾಗ್ ಮತ್ತಿತರ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಇವು ಪಕ್ಕದ ಹೊಲಗಳಲ್ಲಿಯೂ ಸಂಗ್ರಹಗೊಳ್ಳುತ್ತಿವೆ. ಅಲ್ಲಿಗೆ ಅದಿರು ಲಾರಿಗಳು ಬಂದು ಹೋಗುವುದರಿಂದ ಅಲ್ಲಿ ಏಳುವ ಧೂಳಿನಿಂದ ಅಕ್ಕಪಕ್ಕದ ಹೊಲಗಳಲ್ಲಿನ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮವಾಗತ್ತಿದೆಯಲ್ಲದೆ, ಇಳುವರಿ ಕುಂಠಿತವಾಗುತ್ತಿದೆ. ಇದರಿಂದ ಅಕ್ಕಪಕ್ಕದ ಹೊಲದವರು ಉತ್ತಮ ಇಳುವರಿ ಬಾರದೆ ನಷ್ಟ ಅನುಭವಿಸುವಂತಾಗಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸುಶೀಲಾನಗರದ ರೈತ ಅಲಿಬಾಷ ಅವರು ಅಹವಾಲು ಸಲ್ಲಿಸಿ, ನಮ್ಮ ೨ ಎಕರೆ ೨೨ ಸೆಂಟ್ಸ್ ಪಟ್ಟಾ ಹೊಲದ ಪಹಣಿಯಲ್ಲಿ ಸರ್ಕಾರ ಎಂದು ನಮೂದಿಸಲಾಗಿದೆ. ಇದನ್ನು ತಿದ್ದುಪಡಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ ೨ ವರ್ಷವಾದರೂ ತಿದ್ದುಪಡಿ ಆಗಿಲ್ಲ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.ರಾಮು ಮಾತನಾಡಿ, ಕೃಷ್ಣಾನಗರ- ತಿಮ್ಮಪ್ಪನಗುಡಿ ಮಾರ್ಗದ ಬಂಡಿಜಾಡಿನಲ್ಲಿ ಅದಿರು ಲಾರಿಗಳ ಸಂಚಾರ ಹೆಚ್ಚಿರುವುದರಿಂದ ರೈತರಿಗೆ, ಕುರಿಗಾಹಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅವುಗಳ ಪರಿಹಾರಕ್ಕೆ ಶೀಘ್ರ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಮಾತನಾಡಿದ ಲೋಕಾಯುಕ್ತ ಎಸ್‌ಪಿ ಸಿದ್ದರಾಜು, ಸರ್ಕಾರಿ ಕಚೇರಿಗಳ ಮುಂದೆ ಲೋಕಾಯುಕ್ತ ಕಚೇರಿ, ಆರ್‌ಟಿಐ ಅಧಿಕಾರಿಗಳು, ಸಕಾಲ ಸೇವೆಗಳ ಬೋರ್ಡನ್ನು ಅಳವಡಿಸಬೇಕು. ಲೋಕಾಯುಕ್ತ ಇಲಾಖೆಯ ೨೬ ಅಂಶಗಳನ್ನು ಕಚೇರಿಯಲ್ಲಿ ಜಾರಿಗೆ ತರಬೇಕು. ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದರಲ್ಲಿ ಲೋಪ ಕಂಡುಬಂದಲ್ಲಿ, ಪ್ರಧಾನ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದರು.೧೨೫ಕ್ಕೂ ಹೆಚ್ಚು ಗ್ರಾಮಗಳಿರುವ ತಾಲೂಕಿನಲ್ಲಿ ಕೇವಲ ೮ ಅರ್ಜಿಗಳು ಸಲ್ಲಿಕೆಯಾಗಿವೆ. ಲೋಕಾಯುಕ್ತರ ಭೇಟಿ ಕುರಿತು ಸೂಕ್ತ ಪ್ರಚಾರ ಆಗಬೇಕಿದೆ. ಅಧಿಕಾರಿಗಳು ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ವಾತಾವರಣ ನಿರ್ಮಿಸಬೇಕು. ಜನರ ಕುಂದುಕೊರತೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದರು.
ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಸಂಗಮೇಶ್, ಮಹಮ್ಮದ್ ರಫೀಕ್, ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು ೮ ಅರ್ಜಿಗಳು ಸಲ್ಲಿಕೆಯಾದವು.