ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ರೈತರು ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳನ್ನು ಹೆಚ್ಚಾಗಿ ಬಳಸುವ ಮೂಲಕ ಉತ್ಪಾದನೆ ಮತ್ತು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಸಲಹೆ ನೀಡಿದರು.

ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣದ ಮಹತ್ವವನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ತಾಲೂಕಿನ ವಿ.ಸಿ.ಫಾರಂನಲ್ಲಿ ಆಯೋಜಿಸಿದ್ದ ಕೃಷಿ ಯಂತ್ರೋಪಕರಣ ಮತ್ತು ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಮೇಳ ಉದ್ಘಾಟಿಸಿ ಮಾತನಾಡಿದರು.

ಅಭಿವೃದ್ಧಿ ಹೊಂದಿದ ಪಶ್ಚಿಮ ರಾಷ್ಟ್ರಗಳಲ್ಲಿ ಕೃಷಿಯಲ್ಲಿ ಶೇ.80 ರಿಂದ 90ರಷ್ಟು ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ನಮ್ಮ ದೇಶದ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸುಮಾರು ಶೇ.40 ರಿಂದ 50ರಷ್ಟು ಯಾಂತ್ರೀಕರಣ ಬಳಕೆಯಲ್ಲಿದೆ. ಕರ್ನಾಟಕದಲ್ಲೂ ಯಾಂತ್ರಿಕೃತ ಕೃಷಿ ಪದ್ಧತಿ ಹೆಚ್ಚಾಗಬೇಕಿದೆ ಎಂದು ನುಡಿದರು.

ಇಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಕರ್ನಾಟಕದಲ್ಲಿ ಹೆಚ್ಚುತ್ತಿದೆ. ಹಾಗಾಗಿ ಕೃಷಿ ಯಾಂತ್ರೀಕರಣ ಅತ್ಯಂತ ಅಗತ್ಯವಾಗಿದೆ. ರೈತರು ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಿಕೊಳ್ಳಬೇಕು. ಇದರೊಂದಿಗೆ ಕೃಷಿ ಯಂತ್ರೋಪಕರಣಗಳ ದುರಸ್ತಿ ವಿಧಾನಗಳು ಹಾಗೂ ಸುರಕ್ಷಿತ ಬಳಕೆ ಕುರಿತು ತರಬೇತಿ ನೀಡುವ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮುಂದಿನ ವರ್ಷಗಳಲ್ಲಿ ಆರಂಭಿಸಲು ಯೋಜಿಸಲಾಗಿದೆ ಎಂದರು.


ಈ ಮೇಳದಲ್ಲಿ ಸುಮಾರು 50ಕ್ಕೂ ಹೆಚ್ಚು ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿಸಿದ ಮಳಿಗೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಕಂಪನಿಗಳು ಹಾಗೂ ಸಂಸ್ಥೆಗಳು ತಮ್ಮ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಪ್ರದರ್ಶಿಸಿದ್ದು, ರೈತರಿಗೆ ಅವುಗಳ ಕಾರ್ಯವಿಧಾನ, ಬಳಕೆ ವಿಧಾನ ಹಾಗೂ ಕೃಷಿಯಲ್ಲಿ ದೊರೆಯುವ ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆ, ಅವುಗಳ ನಿರ್ವಹಣೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಹೆಚ್ಚಿಸುವಲ್ಲಿ ಅವುಗಳ ಪಾತ್ರದ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು, ಅವುಗಳ ಬಳಕೆಯಿಂದ ಸಮಯ ಮತ್ತು ಕಾರ್ಮಿಕ ವೆಚ್ಚವನ್ನು ಹೇಗೆ ಕಡಿಮೆ ಮಾಡಬಹುದು ಹಾಗೂ ಬೆಳೆ ಉತ್ಪಾದನೆಯನ್ನು ಹೇಗೆ ಹೆಚ್ಚಿಸಬಹುದು ಎಂಬ ಕುರಿತು ಸಂಪನ್ಮೂಲ ವ್ಯಕ್ತಿಗಳು ಪ್ರಾಯೋಗಿಕ ಉದಾಹರಣೆಗಳೊಂದಿಗೆ ವಿವರಿಸಿದರು.

ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ ಮಾತನಾಡಿ, ರೈತರಿಗೆ ಕೈಗೆಟಿಕುವ ದರದಲ್ಲಿ ಕೃಷಿ ಯಂತ್ರೋಪಕರಣಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ ಬಳಕೆ ಕುರಿತು ವಿಶ್ವ ವಿದ್ಯಾಲಯದಿಂದ ಹೆಚ್ಚಿನ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ಎಚ್.ಎಚ್.ಶಿವರಾಮ, ಮಂಡ್ಯ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ, ಸಂಶೋಧನಾ ನಿರ್ದೇಶಕ ಡಾ.ದೇವಗಿರಿ, ಶಿಕ್ಷಣ ನಿರ್ದೇಶಕ ಡಾ.ಎನ್. ಶಿವಕುಮಾರ್, ಚಾಮರಾಜನಗರ ಕೃಷಿ ಮಹಾ ವಿದ್ಯಾಲಯದ ವಿಶೇಷಾಧಿಕಾರಿ ಡಾ.ದೊರೆಸ್ವಾಮಿ, ವಿಜ್ಞಾನಿಗಳಾದ ಡಾ.ಕರೋಲಿನಿ, ಸಹ ಸಂಶೋಧನಾ ನಿರ್ದೇಶಕ ಡಾ.ಬಸವರಾಜು, ಯಂತ್ರೋಪಕರಣ ವಿಭಾಗದ ಪ್ರಾಯೋಜನಾ ಮುಖ್ಯಸ್ಥೆ ಡಾ.ಎಂ.ಎಸ್.ಶ್ರೀದೇವಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೂ ಹೆಚ್ಚು ರೈತರು ಭಾಗವಹಿಸಿ ವಿವಿಧ ಕೃಷಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು.