ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ: ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

| Published : Oct 02 2024, 01:10 AM IST

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ: ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆಯನ್ನು ಬಳಸಿರುವುದು ಆಘಾತಕಾರಿ ವಿಷಯ. ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ನೀಡುವ ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆಯನ್ನು ಬಳಸಿರುವುದು ಅಘಾತಕಾರಿ ವಿಷಯವಾಗಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರುವ ದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆಗ್ರಹಿಸಿದೆ.

ಪ್ರಕರಣದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಸೂಚಿಸುವಂತೆ ಪ್ರಧಾನ ಮಂತ್ರಿಗಳಿಗೆ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರ ಮೂಲಕ ಸೋಮವಾರ ಮನವಿ ಪತ್ರ ಸಲ್ಲಿಸಿದರು.

ದೇವಸ್ಥಾನದಲ್ಲಿ ಕೊಡುವ ಲಾಡು ಕೇವಲ ಆಹಾರವಲ್ಲ ಅದೊಂದು ಆಧ್ಯಾತ್ಮಿಕ ಭಾಗವಾಗಿದೆ. ಅದರಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವುದು ಭಕ್ತರಲ್ಲಿ ಕೋಪ ಮೂಡಿಸಿದೆ. ಈ ಕಾರಣದಿಂದ ತಪ್ಪಿಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗನ್ನಮೋಹನ ರೆಡ್ಡಿ ಮತ್ತು ಅವರ ತಂದೆ ರಾಜಶೇಖರ್ ರೆಡ್ಡಿ ಅವರ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನಕ್ಕೆ ಸಂಬಂಧಿಸಿ ತೆಗೆದುಕೊಂಡತಹ ಎಲ್ಲ ನಿರ್ಧಾರಗಳನ್ನು ಕೂಲಂಕುಷವಾಗಿ ತನಿಖೆ ಮಾಡಬೇಕು. ಹಿಂದು ವಿರೋಧಿ ನಿರ್ಣಯಗಳು ಇದ್ದಲ್ಲಿ ಅವುಗಳನ್ನು ರದ್ದುಪಡಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. ಮನವಿ ಸಲ್ಲಿಸುವ ಸಂದರ್ಭ ಮಹಾಸಭಾದ ಪದಾಧಿಕಾರಿಗಳಾದ ಮಂಜುನಾಥ ಆಚಾರ್ಯ, ಜಗದೀಶ್ ಉಡುಪ, ಪಿ.ಎನ್.ಪ್ರಸಾದ್, ಪ್ರಸನ್ನ ಗಾಂವಕ್ಕರ್, ಚಿತ್ರಕುಮಾರ್ ಭಟ್, ಮಣಿ ಎನ್ ಬಜೆಗುಂಡಿ, ಉದಯ್‌ಕುಮಾರ್ ಮತ್ತಿತರರು ಇದ್ದರು.