ಉಡುಪಿ ಜಿಲ್ಲೆಯಲ್ಲಿ ನ. 24ರಂದು ಆಯೋಜಿಸಲಾಗಿರುವ ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಖರ್ಚುವೆಚ್ಚಗಳಿಗೆ ಗ್ರಾಪಂಗಳ ಸ್ವಂತ ನಿಧಿಯನ್ನು ಬಳಸುವುದಕ್ಕೆ ಉಡುಪಿ ಜಿಲ್ಲೆಯ ಐವರು ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನ. 24ರಂದು ಆಯೋಜಿಸಲಾಗಿರುವ ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಖರ್ಚುವೆಚ್ಚಗಳಿಗೆ ಗ್ರಾಪಂಗಳ ಸ್ವಂತ ನಿಧಿಯನ್ನು ಬಳಸುವುದಕ್ಕೆ ಉಡುಪಿ ಜಿಲ್ಲೆಯ ಐವರು ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಶಾಸಕರು ಶನಿವಾರ ಜಂಟಿ ಸುದ್ಧಿಗೋಷ್ಠಿ ನಡೆಸಿ, ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದರು.ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಮಾವೇಶದಲ್ಲಿ ಫಲಾನುಭವಿಗಳ ಊಟೋಪಚಾರ ವಾಹನ ವ್ಯವಸ್ಥೆಗೆ ಜಿಲ್ಲೆಯ ಎಲ್ಲ ಗ್ರಾಪಂಗಳು ಸ್ವಂತ ನಿಧಿಯಿಂದ ತಲಾ 25,000 ರು. ನೀಡುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ, ಇದು ಕಾನೂನು ಬಾಹಿರ ಎಂದರು.

ಈ ಸಮಾವೇಶಕ್ಕೆ ಜಿಲ್ಲೆಯ 155 ಗ್ರಾಪಂಗಳಿಂದ ತಲಾ 25,000 ರು.ಗಳಂತೆ ಒಟ್ಟು 38,75,000 ರು.ಗಳಷ್ಟು ಭಾರೀ ಮೊತ್ತವನ್ನು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಇದೆ, ಸರ್ಕಾರ ಆರ್ಥಿಕ ದುಸ್ಥಿತಿಯಲ್ಲಿದೆ, ಹಾಗಿರುವಾಗ ಗ್ರಾಪಂನ ಸ್ವಂತ ನಿಧಿಯನ್ನು ಈ ರೀತಿ ಬಳಕೆ ಮಾಡುವುದು ಸರಿಯಲ್ಲ.

ಗ್ರಾಮೀಣಾಭಿವೃದ್ಧಿ - ಪಂಚಾಯತ್ ರಾಜ್ ಇಲಾಖೆ ನಿಮಯಗಳ‍ ಪ್ರಕಾರ ಗ್ರಾಪಂನಲ್ಲಿ ಜನರ ತೆರಿಗೆಯಿಂದ ಸಂಗ್ರಹವಾಗುವ ಸ್ವಂತ ನಿಧಿಯನ್ನು ವಿದ್ಯುತ್ ಬಿಲ್, ನೀರಿನ ಬಿಲ್, ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯ, ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಬಳಸಬೇಕು ಎಂದಿದೆ. ಅದನ್ನು ಈ ರೀತಿ ಸಮಾವೇಶಕ್ಕೆ ಬಳಕೆ ಮಾಡುವಂತಿಲ್ಲ.ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಟ್ಯಾಂಕರ್‌ಗಳಿಂದ ನೀರು ಪೂರೈಸಬೇಕಾಗಿದೆ, ಅದಕ್ಕೆ ಸರ್ಕಾರ ಹಣ ನೀಡಿಲ್ಲ, ಗ್ರಾಪಂಗಳಿಂದ ಮೆಸ್ಕಾಂಗೆ ವಿದ್ಯುತ್ ಬಿಲ್ ಬಾಕಿ ಇದೆ, ಬೀದಿ ದೀಪ ನಿರ್ವಹಣೆ ಮಾಡಬೇಕಾಗಿದೆ, 15ನೇ ಹಣಕಾಸು ಆಯೋಗದಿಂದ ಅನುದಾನವೇ ಬಂದಿಲ್ಲ, ಗ್ರಾಪಂ ಸಿಬ್ಬಂದಿಗಳಿಗೆ ವೇತನ ಬಾಕಿ ಇದೆ, ಇದಕ್ಕೆಲ್ಲಾ ಗ್ರಾಪಂಗಳ ಸ್ವಂತ ನಿಧಿಯ ಹಣವೇ ಸಾಕಾಗುವುದಿಲ್ಲ, ಹಾಗಿರುವಾಗ ಈ ನಿಧಿಯನ್ನು ಏಕಪಕ್ಷಿಯವಾಗಿ, ಜಿಲ್ಲೆಯ 5 ಮಂದಿ ಶಾಸಕರ ಗಮನಕ್ಕೂ ತಾರದೇ, ಸಮಾವೇಶಕ್ಕೆ ನೀಡುವುದಕ್ಕೆ ನಿರ್ಧಿಸಿರುವುದಕ್ಕೆ ತಮ್ಮೆಲ್ಲರ ವಿರೋಧ ಇದೆ. ಉಡುಪಿ ಜಿಲ್ಲೆಯ ಈ ಆದೇಶ ಉಳಿದ ಜಿಲ್ಲೆಗಳಿಗೂ ಉದಾಹರಣೆಯಾಗುವ ಆತಂಕವಿದೆ ಎಂದರು.ಗ್ಯಾರಂಟಿ ಸಮಾವೇಶ ಮಾಡುವುದಕ್ಕೆ ತಮ್ಮ ವಿರೋಧ ಇಲ್ಲ, ಇದರಲ್ಲಿ ಯಾವುದೇ ರಾಜಕೀಯವೂ ಇಲ್ಲ. ಸರ್ಕಾರ ಸಮಾವೇಶಕ್ಕೆ ಪ್ರತ್ಯೇಕ ವಿಶೇಷ ಅನುದಾನ ನೀಡಲಿ ಮತ್ತು ಇನ್ನಷ್ಟು ಚೆನ್ನಾಗಿ ಸಮಾವೇಶ ಮಾಡಲಿ ಎಂದು ಸುನಿಲ್ ಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾಪು ಶಾಸಕ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.ಮೆಸ್ಕಾಂಗೆ 2.65 ಕೋಟಿ ರು. ಬಾಕಿ !ಮಂಗಳೂರು ವಿದ್ಯುತ್ ಪೂರೈಕೆ ಕಂಪೆನಿಯು ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಅದರಲ್ಲಿ ನೀರು ಪೂರೈಕೆಯ ವಿದ್ಯುತ್‌ ಬಿಲ್ 2,25,79,998 ರು. ಮತ್ತು ಬೀದಿ ದೀಪಗಳ ವಿದ್ಯುತ್ ಬಿಲ್ 38,64,772 ರು. ಸೇರಿ 2,64,44,770 ರು. ಬಾಕಿ ಇದೆ ಎಂದು ಪತ್ರ ಬರೆದಿದೆ ಎಂದು ಸುನಿಲ್ ಕುಮಾರ್ ದಾಖಲೆಗಳನ್ನು ಬಿಡುಗಡೆ ಮಾಡಿದರು.ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ... !

ರಾಜ್ಯ ಸರ್ಕಾರ ಆ. 6ರಂದು ಜಿಲ್ಲಾಡಳಿತಗಳಿಗೆ ಸುತ್ತೋಲೆ ಹೊರಡಿಸಿ, ಜಿಲ್ಲಾ ಪ್ರಜಾ ಸೇವಾ ಆಂದೋಲನಕ್ಕೆ 5 ಲಕ್ಷ ರು., ತಾಲೂಕು ಪ್ರಜಾಸೇವಾ ಸಭೆಗಳಿಗೆ ತಲಾ 1 ಲಕ್ಷ ರು. ಮತ್ತು ಹೋಬಳಿ ಮಟ್ಟದ ಪ್ರಜಾಸೇವಾ ಸಭೆಗಳಿಗೆ ತಲಾ 50 ಸಾವಿರ ರು. ನೀಡುವುದಾಗಿ ಹೇಳಿತ್ತು.

ಈಗ ನ. 19ರಂದು ಇನ್ನೊಂದು ಸುತ್ತೋಲೆ ಹೊರಡಿಸಿ, ಈ ಪ್ರಜಾಸೇವಾ ಸಭೆಗಳು ಯಾವ ಗ್ರಾಪಂನಲ್ಲಿ ನಡೆಯುತ್ತವೆಯೋ ಆ ಗ್ರಾಪಂಗಳೇ ಈ ವೆಚ್ಚವನ್ನು ಭರಿಸಬೇಕು ಎಂದು ಆದೇಶಿಸಿದೆ.

ಈ ರೀತಿ ಗ್ರಾಪಂಗಳು ಹಣ ನೀಡುವುದಕ್ಕೆ ಗ್ರಾಪಂನ ಸದಸ್ಯರ 3ನೇ 2ರಷ್ಟು ಬಹುಮತ ಬೇಕು, ಸಾಮಾನ್ಯ ಸಭೆಯಲ್ಲಿ ನಿರ್ಧಾರವಾಗಬೇಕು, ಆದರೆ ಪ್ರಸ್ತುತ ಗ್ರಾಪಂಗಳಲ್ಲಿ ಜನಪ್ರತಿನಿಧಿಗಳ ಆಡಳಿತವೇ ಇಲ್ಲ, ಹಾಗಿರುವಾಗ ಆಡಳಿತಾಧಿಕಾರಿ ಈ ನಿರ್ಧಾರವನ್ನು ತೆಗದುಕೊಳ್ಳುವಂತೆ ಇಲ್ಲ, ಆದರೂ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿಸುವುದಕ್ಕೆ ಹೊರಟಿದೆ ಎಂದು ಶಾಸಕರು ಲೇವಡಿ ಮಾಡಿದರು.