ಸಾರಾಂಶ
ಸರ್ಕಾರದ ಕಡೆ ಕೈ ಮಾಡಿ ತೋರಿಸುವ ಇಂದಿನ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ದೇವಾಲಯಕ್ಕೆ ಸಂಗ್ರಹವಾದ ದೇಣಿಗೆಯನ್ನು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ವೆಚ್ಚ ಮಾಡಿರುವುದು ಮಾದರಿಯಾಗಿದೆ.
ಕುಷ್ಟಗಿ:
ದೇಗುಲದ ದೇಣಿಗೆ ಹಣವನ್ನು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬಳಕೆ ಮಾಡಿರುವುದು ಶ್ಲಾಘನೀಯ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ತಾಲೂಕಿನ ವಣಗೇರಾ ಗ್ರಾಮದಲ್ಲಿ ಶಿವನಮ್ಮ ದೇವಿ ದೇವಸ್ಥಾನದ ದೇಣಿಗೆ ಹಣದಿಂದ ಗ್ರಾಮಸ್ಥರು ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮೂರು ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಕಡೆ ಕೈ ಮಾಡಿ ತೋರಿಸುವ ಇಂದಿನ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ದೇವಾಲಯಕ್ಕೆ ಸಂಗ್ರಹವಾದ ದೇಣಿಗೆಯನ್ನು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ವೆಚ್ಚ ಮಾಡಿರುವುದು ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಈ ಗ್ರಾಮಕ್ಕೆ ಪ್ರೌಢಶಾಲೆ ಹಾಗೂ ಕಾಲೇಜು ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿ, ವಣಗೇರಾ ಗ್ರಾಮಸ್ಥರು ಮಾಡಿರುವ ಈ ಉತ್ತಮ ಕಾರ್ಯವೂ ಮಾದರಿಯಾಗಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಂಡು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಎಲ್ಲ ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದರು.
ಬಿಜಕಲ್ ಮಠದ ಶಿವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಪಂಪಾಪತಿ ಹಿರೇಮಠ, ದೊಡ್ಡಬಸವನಗೌಡ ಬಯ್ಯಾಪೂರ, ಕೆ. ಮಹೇಶ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮುಖ್ಯಶಿಕ್ಷಕರು, ಗ್ರಾಮಸ್ಥರು, ಶಿವನಮ್ಮ ದೇವಿ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಇದ್ದರು.