ನರಸಿಂಹರಾಜಪುರಗುಬ್ಬಿಗಾ ಗ್ರಾಮ ಪಂಚಾಯಿತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಎನ್.ಆರ್.ಎಲ್.ಎಂ. ಸಂಜೀವಿನಿ ಕಟ್ಟಡವನ್ನು ಮಹಿಳೆಯರು ಸಮಾಜಮುಖಿ ಕಾರ್ಯಕ್ಕೆ ಬಳಸುವಂತೆ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

- ಗುಬ್ಬಿಗಾ ಗ್ರಾಮ ಪಂಚಾಯಿತಿಯಲ್ಲಿ ಎನ್.ಆರ್.ಎಲ್.ಎಂ.ಸಂಜೀವಿನಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಗುಬ್ಬಿಗಾ ಗ್ರಾಮ ಪಂಚಾಯಿತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಎನ್.ಆರ್.ಎಲ್.ಎಂ. ಸಂಜೀವಿನಿ ಕಟ್ಟಡವನ್ನು ಮಹಿಳೆಯರು ಸಮಾಜಮುಖಿ ಕಾರ್ಯಕ್ಕೆ ಬಳಸುವಂತೆ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಮಂಗಳವಾರ ತಾಲೂಕಿನ ಗುಬ್ಬಿಗಾ ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎನ್.ಆರ್.ಎಲ್.ಎಂ. ಸಂಜೀವಿನಿ ಕಟ್ಟಡ ಉದ್ಘಾಟಿಸಿ ಮಾತನಾಡಿ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಪಂಚ ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಯಿಂದ ಪ್ರತಿ ಕುಟುಂಬಕ್ಕೂ ₹50 ಸಾವಿರ ಸಿಗಲಿದೆ. ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಂದ ₹60 ಸಾವಿರ ಕೋಟಿ ಖರ್ಚಾಗುತ್ತಿದೆ. ಆದರೂ ಅಭಿವೃದ್ಧಿ ಕಾರ್ಯ ಕುಂಠಿತವಾಗಿಲ್ಲ. ಮಳೆಗಾಲ ಮುಗಿಯುತ್ತಿದ್ದಂತೆ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಿದ್ದೇವೆ. ಹೆಚ್ಚು ಹಾಳಾದ ರಸ್ತೆ ದುರಸ್ತಿ ಮಾಡಿಸಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಗ್ರಾಮೀಣ ರಸ್ತೆ ದುರಸ್ತಿ ಮಾಡಲಿದ್ದೇವೆ ಎಂದರು.

ಮುಂದಿನ 1 ತಿಂಗಳಲ್ಲಿ ರಸ್ತೆ ಅಭಿವೃದ್ಧಿಗೆ ಮತ್ತೆ ₹100 ಕೋಟಿ ಅನುದಾನ ಬರಲಿದೆ. ಗುಬ್ಬಿಗಾ ಗ್ರಾಪಂ ವ್ಯಾಪ್ತಿಯಲ್ಲಿ ₹1.50 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ದುರಸ್ತಿಯಾಗಿದೆ. ಮುಂದೆ ಗ್ರಾಮೀಣ ರಸ್ತೆ ದುರಸ್ತಿ ವೇಳೆ ರಸ್ತೆ ಎರಡು ಬದಿಯ ಚರಂಡಿ ಸ್ವಚ್ಛ ಮಾಡಲಾಗುವುದು. ರಸ್ತೆಗೆ ಅಡ್ಡಲಾಗಿ ಬಂದ ಮರದ ಗೆಲ್ಲು ಗಳನ್ನು ತೆಗೆಸಲಾಗುವುದು ಎಂದರು.

ಚಿಕ್ಕಮಗಳೂರು- ನ.ರಾ.ಪುರ ರಸ್ತೆ, ಕೊಪ್ಪ- ಕೊರಲಕೊಪ್ಪ ರಸ್ತೆ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗೆ ₹19 ಕೋಟಿ ಮಂಜೂರಾಗಿದೆ. ಶೆಟ್ಟಿಕೊಪ್ಪದಲ್ಲಿ 1 ಕಿ.ಮೀ. ರಸ್ತೆಗೆ ₹1.50 ಕೋಟಿ, ನರಸಿಂಹರಾಜಪುರ ಪಟ್ಟಣಕ್ಕೆ ಶಾಶ್ವತ ನೀರಿಗೆ ಮುತ್ತಿನಕೊಪ್ಪದ ತುಂಗಾ ನದಿಯಿಂದ ನೀರು ತರುವ ₹30 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ - ರಾಜ್ಯ ಸರ್ಕಾರದ ₹700 ಕೋಟಿ ವೆಚ್ಚದ ಮನೆ, ಮನೆಗೆ ಕುಡಿ ಯುವ ನೀರಿನ ಯೋಜನೆ ಪ್ರಾರಂಭಿಸಲಿದ್ದು ಸರ್ವೆ ಕಾರ್ಯ ನಡೆಯುತ್ತಿದೆ ಎಂದರು.

ಮಲೆನಾಡು ಭಾಗದಲ್ಲಿ ಒತ್ತುವರಿ ಸಮಸ್ಯೆ ತೀವ್ರವಾಗಿದೆ. ನಾನು ಶಾಸಕನಾಗಿ ಕಳೆದ 2.50 ವರ್ಷದಿಂದ ಕಾನೂನು ಬದ್ಧವಾಗಿ 94 ಸಿ, 94 ಸಿಸಿ, ಫಾರಂ ನಂ. 50,53,57 ರಲ್ಲಿ ಹಕ್ಕು ಪತ್ರ ನೀಡಿದ್ದೇವೆ. ಕಾನೂನು ತೊಡಕು ನಿವಾರಿಸಲು ಟಾಸ್ಕ್ ಪೋರ್ಸ್ ಸಮಿತಿ ರಚನೆಯಾಗಿದೆ. ಕೆಲವು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಯಾಗಿದ್ದ ಗೋಪಾಲ ಕೃಷ್ಣ 1.46 ಲಕ್ಷ ಹೆಕ್ಟೇರ್ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿ ಸಿದ್ದರು. ಇದರಲ್ಲಿ 25 ಸಾವಿರ ಎಕ್ರೆ ಭೂಮಿ ಮತ್ತೆ ಕಂದಾಯ ಇಲಾಖೆಗೆ ವಾಪಾಸು ಪಡೆಯಲಾಗಿದೆ. ಟಾಸ್ಕ್ ಪೋರ್ಸ ಸಮಿತಿ ಸರ್ವೆ ಕಾರ್ಯ ಮಾಡಿಸಲಿದೆ. ಇದರಿಂದ ಅರಣ್ಯ , ಒತ್ತವರಿ ಹಾಗೂ ಕಂದಾಯ ಭೂಮಿ ಬಗ್ಗೆ ನಿಖರವಾಗಿ ತಿಳಿಯಲಿದೆ ಎಂದರು.

ಗುಬ್ಬಿಗಾ ಗ್ರಾಪಂ ಸದಸ್ಯ ಹಾಗೂ ಕೆಡಿಪಿ ಸದಸ್ಯ ಕೆ.ವಿ.ಸಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡಿದೆ. ಗುಬ್ಬಿಗಾ ಸಂಜೀವಿನಿ ಒಕ್ಕೂಟಕ್ಕಾಗಿ ಎನ್.ಆರ್. ಎಲ್.ಎಂ ಸಂಜೀವಿನಿ ಕಟ್ಟಡ ನಿರ್ಮಾಣವಾಗಿದೆ. ಮಹಿಳೆಯರ ಸಬಲೀಕರಣ ಹಾಗೂ ಸ್ವಾವಲಂಭಿ ಯಾಗಬೇಕೆಂಬುದು ಸರ್ಕಾರದ ಆಶಯ. ಈ ಕಟ್ಟಡವನ್ನು ಸಂಜೀವಿನಿ ಒಕ್ಕೂಟದವರು ಸಾಂಸ್ಕೃತಿಕ ಕಾರ್ಯಕ್ರಮ. ತಿಂಗಳ ಸಭೆಗೆ ಉಪಯೋಗಿಸಿಕೊಳ್ಳಬಹುದು. ಗುಬ್ಬಿಗಾ ಗ್ರಾಪಂನ ಎಲ್ಲಾ ಮಹಿಳೆಯರು ಸಂಜೀವಿನಿ ಕಟ್ಟಡ ಉಪಯೋಗಿಸಿಕೊಳ್ಳಬಹುದು ಎಂದರು. ಮುಖ್ಯ ಅತಿಥಿಯಾಗಿದ್ದ ಗ್ರಾಪಂ ಅಧ್ಯಕ್ಷೆ ಕೆ.ಟಿ. ನಾಗರತ್ನ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಜೀವಿನಿ ಕಟ್ಟಡದ ಕೀಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮಿ ಮತ್ತು ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಮುಖ್ಯ ಅತಿಥಿಯಾಗಿ ಉಪಾಧ್ಯಕ್ಷ ಡಿ.ಶಂಕರ, ಸದಸ್ಯರಾದ ಉಮಾದೇವಿ, ಜಯಂತಿ ಲೋಕೇಶ್, ವಸಂತಕುಮಾರ್, ಜಿ.ಎ.ಸತೀಶ್,ಉಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್, ತಾಪಂ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಮನೀಶ್, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಕ್ಷೇತ್ರ ಕುಮಾರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮಿ, ಗ್ರಾಪಂ ಪಿಡಿಒ ಸೀಮಾ ಇದ್ದರು.ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಅಭಿನಂದಿಸಲಾಯಿತು. ಅಶೋಕ್ ಸ್ವಾಗತಿಸಿದರು. ಶೈನಿ ಕಾರ್ಯಕ್ರಮ ನಿರೂಪಿಸಿದರು.

-- ಬಾಕ್ಸ್ --

ಎಲ್ಲಾ ಪಕ್ಷದವರು ಒಟ್ಟಾಗಿ ಕೆಲಸ ಮಾಡೋಣ

ನನ್ನ ಮೇಲೆ ವಿರೋದ ಪಕ್ಷದ ಕೆಲವರು ಸುಳ್ಳು ರಾಜಕೀಯ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ಎಲ್ಲಾ ಪಕ್ಷದವರು ಒಟ್ಟಾಗಿ ಶೃಂಗೇರಿ ಕ್ಷೇತ್ರಕ್ಕೆ ಒಳ್ಳೆಯದಾಗಲಿ ಎಂದು ಕೆಲಸ ಮಾಡೋಣ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಗ್ರಾಪಂ ಅವಧಿ ಫೆಬ್ರವರಿ 3 ಕ್ಕೆ ಮುಕ್ತಾಯಗೊಳ್ಳಲಿದೆ. 5 ವರ್ಷದ ಅವಧಿಯಲ್ಲಿ ಎಲ್ಲಾ ಗ್ರಾಪಂ ಸದಸ್ಯರು ಕಡಿಮೆ ಅನುದಾನ ಇದ್ದರೂ ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ ಎಂದರು.