ಜನಸಾಮಾನ್ಯರಿಗೆ ಆರೋಗ್ಯ ಸುರಕ್ಷತೆ ಹಾಗೂ ರಕ್ತದಾನದ ಕುರಿತು ಪರಿಣಾಮಕಾರಿಯಾಗಿ ಮಾಹಿತಿ ತಲುಪಿಸಲು ಸಾಮಾಜಿಕ ಜಾಲತಾಣಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜನಸಾಮಾನ್ಯರಿಗೆ ಆರೋಗ್ಯ ಸುರಕ್ಷತೆ ಹಾಗೂ ರಕ್ತದಾನದ ಕುರಿತು ಪರಿಣಾಮಕಾರಿಯಾಗಿ ಮಾಹಿತಿ ತಲುಪಿಸಲು ಸಾಮಾಜಿಕ ಜಾಲತಾಣಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದಿನ ಪೀಳಿಗೆಯ ಜನರು ಸಾಮಾಜಿಕ ಜಾಲತಾಣಗಳ ಮೂಲಕವೇ ಹೆಚ್ಚಾಗಿ ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗಿ, ಪತ್ರಿಕೆಗಳ ಜೊತೆಗೆ ವಿಡಿಯೋ ಕಂಟೆಂಟ್ ಮೂಲಕ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದರು.ಅತಿ ಹೆಚ್ಚು ಅನುಯಾಯಿಗಳನ್ನು(ಫಾಲೋವರ್ಸ್) ಹೊಂದಿರುವ ಸ್ಥಳೀಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳನ್ನು ಭೇಟಿ ಮಾಡಿ, ಅವರಿಂದ ಜಾಗೃತಿ ವಿಡಿಯೋಗಳನ್ನು ಮಾಡಿಸಬೇಕು. ಏಡ್ಸ್ ಮುಕ್ತ ಭಾರತ ನಿರ್ಮಾಣಕ್ಕಾಗಿ ವಯಸ್ಕರಲ್ಲಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆ್ಯಪ್‌ಗಳ ಅರಿವು ಕಡಿಮೆ ಇರುವುದರಿಂದ ಕುಟುಂಬಸ್ಥರು ಅವರಿಗೆ ಸುರಕ್ಷತೆಯ ಬಗ್ಗೆ ಮನೆಯಲ್ಲೇ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು, ಖಾಸಗಿ ಸಂಸ್ಥೆಗಳು ಹಾಗೂ ಖಾಸಗಿ ಬ್ಯಾಂಕ್‌ಗಳು ಸೇರಿದಂತೆ ಸಮಾಜದ ಎಲ್ಲ ವರ್ಗದವರು ರಕ್ತದಾನ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ರಕ್ತದಾನ ಮಾಡುವವರಿಗೆ ಅಗತ್ಯ ಸೌಲಭ್ಯ ಹಾಗೂ ಅನುಕೂಲ ಕಲ್ಪಿಸುವ ಮೂಲಕ ಈ ಶಿಬಿರವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಗೂಗಲ್ ಸ್ಪ್ರೆಡ್‌ಶೀಟ್ ಬಿಡುಗಡೆ ಮಾಡಲಾಗಿದ್ದು, ಆಸಕ್ತರು ಅದರಲ್ಲಿ ನೋಂದಣಿ ಮಾಡಿಕೊಂಡು ರಕ್ತದಾನ ಅಭಿಯಾನದಲ್ಲಿ ಭಾಗವಹಿಸಬೇಕು. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳನ್ನು ನೋಂದಾಯಿಸಿ, ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ತಿಳಿಸಿದರು.ಅಭಿಯಾನದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಜೊತೆಗೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಲಾಗುವುದು ಎಂದರು.ರಕ್ತದಾನಕ್ಕೆ ಸಂಬಂಧಿಸಿದಂತೆ ಗಿನ್ನಿಸ್ ಮತ್ತು ವಿಶ್ವ ದಾಖಲೆಗಳಂತಹ ಸಾಧನೆಗಳು ನಡೆದಿರುವ ಹಿನ್ನೆಲೆಯಲ್ಲಿ, ನಮ್ಮ ಜಿಲ್ಲೆಯಲ್ಲಿಯೂ ಮಾದರಿಯಾಗುವಂತಹ ಬೃಹತ್ ಹಾಗೂ ವ್ಯವಸ್ಥಿತ ರಕ್ತದಾನ ಶಿಬಿರವನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಈ ಶಿಬಿರವನ್ನು ಯಶಸ್ವಿಗೊಳಿಸುವ ಮೂಲಕ ಸಮಾಜಕ್ಕೆ ಮಾದರಿಯಾಗುವಂತಹ ರಕ್ತದಾನ ಅಭಿಯಾನ ರೂಪಿಸಬೇಕು ಎಂದು ಸಿಇಒ ರಾಹುಲ್ ಶಿಂಧೆ ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ ಗಡಾದ, ಬೆಳಗಾವಿ ತಾಲೂಕಾ ವೈದ್ಯಾಧಿಕಾರಿ ಸಂಜಯ ನಾಂದ್ರೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.