ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಸಮಸ್ಯೆಗಳೂ ಹೆಚ್ಚುತ್ತಿದ್ದು, ಮೊಬೈಲ್, ವಾಟ್ಸ್ಯಾಪ್, ಫೇಸ್ ಬುಕ್ ಸೇರಿ ಸಾಮಾಜಿಕ ಜಾಲತಾಣ ಬಳಸುವಾಗ, ವೆಬ್‌ಸೈಟ್ ಹಂಚಿಕೊಳ್ಳುವಾಗ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸದಿದ್ದರೆ, ನಿಮ್ಮ ಗೌರವಕ್ಕೆ ಧಕ್ಕೆ ತಂದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಸಿದ್ದಾರೆ.ತಾಲೂಕಿನ ತೋಳಹುಣಸೆಯ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಸ್ನಾತಕೋತ್ತರ ವಿದ್ಯಾರ್ಥಿ ಕೂಟ ಉದ್ಘಾಟಿಸಿ ಮಾತನಾಡಿ, ಮೊಬೈಲ್ ಬಳಕೆ ಜ್ಞಾನಾರ್ಜನೆಗೆ ಬಳಕೆಯಾಗಬೇಕೆ ಹೊರತು, ನಿಮ್ಮ ಬದುಕು, ಭವಿಷ್ಯಕ್ಕೆ ಅದು ಮಾರಕವಾಗಬಾರದು. ಜ್ಞಾನ ಪಡೆಯಲು ಮಾತ್ರ ಸಾಮಾಜಿಕ ಜಾಲತಾಣ ಮಿತವಾಗಿ ಬಳಸಿ, ವಿಶೇಷವಾಗಿ ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಅನಕ್ಷರಸ್ಥರಷ್ಟೇ ಅಲ್ಲ, ವಿದ್ಯಾವಂತರು ಕೂಡ ಸೈಬರ್ ಕಳ್ಳರ ಜಾಲದಲ್ಲಿ ಸಿಲುಕಿ, ಲಕ್ಷಾಂತರ ರುಪಾಯಿ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಯುವ ಜನತೆ ಈಚಿನ ದಿನಗಳಲ್ಲಿ ದುಶ್ಚಟ, ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಡ್ರಗ್ಸ್ ಜಾಲಕ್ಕೆ ಬಲಿಯಾಗುತ್ತಾ, ತಮ್ಮ ಬದುಕು, ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದು, ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು ನಿಮ್ಮ ಕುಟುಂಬ ಮತ್ತು ವೈಯಕ್ತಿಕ ಜೀವನವನ್ನೇ ಸಂಪೂರ್ಣ ನಾಶಪಡಿಸುತ್ತದೆ. ಯಾರೇ ಆಗಲಿ ಅಂತಹ ವ್ಯಸನಕ್ಕೆ ತುತ್ತಾದರೆ, ಅಂತಹವರ ಮತ್ತೆ ಹೊರ ತರುವುದು ಕಷ್ಟ ಎಂದು ತಿಳಿಸಿದರು.ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಚಿಂತಿಸಬೇಕು. ನಿರುದ್ಯೋಗದ ಬಗ್ಗೆ ಆಲೋಚನೆ ಮಾಡಬೇಡಿ. ನಿಮ್ಮ ಕೌಶಲ್ಯಗಳಿಗೆ ತಕ್ಕಂತೆ ಸಾಧನೆಗೆ ಸಾಕಷ್ಟು ಮಾರ್ಗಗಳಿವೆ. ಪ್ರತಿ ವಿದ್ಯಾರ್ಥಿಯಲ್ಲೂ ವಿಶೇಷವಾಗಿ ಏನಾದರೂ ಸಾಧಿಸುವ ಸಾಮರ್ಥ್ಯ ಇರುತ್ತದೆ. ಅಂತಹ ಸಾಮರ್ಥ್ಯಕ್ಕೆ ತಕ್ಕಂತೆ ಸಾಧನೆ ಮಾಡಿ, ಹೆತ್ತವರು, ವಿದ್ಯೆ ನೀಡಿದ ವಿಶ್ವ ವಿದ್ಯಾನಿಲಯಕ್ಕೂ ಕೀರ್ತಿ ತರಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಮಾತನಾಡಿ, ಶೈಕ್ಷಣಿಕ ಅಧ್ಯಯನ ಜೊತೆ ಕಲೆ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು. ವಿದ್ಯಾರ್ಥಿಗಳು ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗೆ ಆದ್ಯತೆ ನೀಡಬೇಕು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿ ಹೆಚ್ಚಿಸುತ್ತವೆ. ನೀವು ಸದೃಢವಾಗಿ ಬೆಳೆಯಬೇಕು ಎಂದರು.ವಿವಿ ಹಣಕಾಸು ಅಧಿಕಾರಿ ಪ್ರೊ.ಆರ್.ಶಶಿಧರ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಯು.ಎಸ್.ಮಹಾಬಲೇಶ್ವರ, ಕಲಾ ನಿಕಾಯದ ಡೀನ್ ಪ್ರೊ.ವೆಂಕಟರಾವ್ ಪಲ್ಲಾಟೆ, ಸ್ನಾತಕೋತ್ತರ ವಿದ್ಯಾರ್ಥಿ ಕೂಟದ ಅಧ್ಯಕ್ಷ ಪ್ರೊ.ಎಚ್.ಎಸ್.ರವಿಕುಮಾರ ಪಾಟೀಲ್, ಕ್ರೀಡಾ ಉಪಾಧ್ಯಕ್ಷ ಡಾ.ಜೋಗಿನಕಟ್ಟೆ ಮಂಜುನಾಥ, ಸಾಂಸ್ಕೃತಿಕ ಉಪಾಧ್ಯಕ್ಷೆ ಡಾ.ಶಶಿಕಲಾ ಯಾಳಗಿ, ಪ್ರಧಾನ ಕಾರ್ಯದರ್ಶಿ ಪವಿತ್ರಾ ಇತರರಿದ್ದರು. ನಾಯಕತ್ವ ಗುಣ ಜಾಗೃತಗೊಳಿಸಿ
ದಾವಿವಿಯಿಂದ ಮೌಲ್ಯಾಧಾರಿತ ಶಿಕ್ಷಣ ದೊರೆಯುತ್ತಿದ್ದು, ಪ್ರತಿ ವಿದ್ಯಾರ್ಥಿಯು ಯುವ ಪ್ರಜೆಯಾಗಿ ನಾಯಕತ್ವ ಗುಣ ಮೈಗೂಡಿಸಿಕೊಂಡು, ಉತ್ತಮ ಸಮಾಜ ನಿರ್ಮಿಸಬೇಕು. ನಾಯಕತ್ವ ಗುಣ ಸಹಜವಾಗಿಯೇ ಪ್ರತಿ ವಿದ್ಯಾರ್ಥಿಯಲ್ಲೂ ಇರುತ್ತದೆ. ಅದನ್ನು ಜಾಗೃತಗೊಳಿಸುವ ಕೆಲಸ ನಿಮ್ಮದಾಗಿರುತ್ತದೆ. ನಾಯಕತ್ವ ಗುಣದಿಂದ ಎಂತಹ ಸನ್ನಿವೇಶ, ಸಂದರ್ಭ ಬಂದರೂ ಎದುರಿಸಿ ಮುನ್ನಡೆಯಬೇಕು.ಉಮಾ ಪ್ರಶಾಂತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಾಧನೆಗೆ ತಯಾರಿ ನಡೆಸಿದಾವಿವಿ ಯಾವುದೇ ಕ್ರೀಡಾಕೂಟವಾದರೂ ವಿದ್ಯಾರ್ಥಿ ಕೂಟದ ಸಹಭಾಗಿತ್ವದಲ್ಲಿ ಆಯೋಜಿಸಿದರೆ, ಹೆಚ್ಚು ಪ್ರೋತ್ಸಾಹ ಸಿಗುತ್ತದೆ. ಇನ್ನು ಯುವಜನ ಮಹೋತ್ಸವ ಸೇರಿದಂತೆ ಮುಂದಿನ ವಿವಿಧ ಸ್ಪರ್ಧೆಗಳಿಗೆ ಸಿದ್ಧತೆ ಆಗಬೇಕು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುವಂತೆ ತಯಾರಿ ಇರಬೇಕು.
ಪ್ರೊ.ಬಿ.ಡಿ.ಕುಂಬಾರ್, ದಾವಿವಿ ಕುಲಪತಿ