ಉದ್ಘಾಟನೆಗೆ ಕಾಯದೇ ಕಟ್ಟಡ ಬಳಸಿಕೊಳ್ಳಿ: ಶಾಸಕ ಶ್ರೀನಿವಾಸ ಮಾನೆ

| Published : Mar 01 2024, 02:22 AM IST

ಉದ್ಘಾಟನೆಗೆ ಕಾಯದೇ ಕಟ್ಟಡ ಬಳಸಿಕೊಳ್ಳಿ: ಶಾಸಕ ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿ ಕಟ್ಟಡಗಳನ್ನು ಉದ್ಘಾಟನೆವರೆಗೂ ಕಾಯದೇ ಕಾಮಗಾರಿ ಪೂರ್ಣಗೊಂಡ ಕೂಡಲೇ ಶೈಕ್ಷಣಿಕ ಚಟುವಟಿಕೆಗಳಿಗೆ ವಿನಿಯೋಗಿಸಬೇಕು.

ಅಂಗನವಾಡಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

ಕನ್ನಡಪ್ರಭ ವಾರ್ತೆ ಹಾನಗಲ್ಲ

ನೂತನವಾಗಿ ನಿರ್ಮಿಸುವ ಶಾಲಾ ಕೊಠಡಿಗಳು, ಅಂಗನವಾಡಿ ಕಟ್ಟಡಗಳನ್ನು ಉದ್ಘಾಟನೆವರೆಗೂ ಕಾಯದೇ ಕಾಮಗಾರಿ ಪೂರ್ಣಗೊಂಡ ಕೂಡಲೇ ಶೈಕ್ಷಣಿಕ ಚಟುವಟಿಕೆಗಳಿಗೆ ವಿನಿಯೋಗಿಸುವಂತೆ ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಗುರುವಾರ ತಾಲೂಕಿನ ಬಸಾಪುರ ಎಂ. ನಿಡಸಂಗಿ ಗ್ರಾಮದಲ್ಲಿ ೨೦೨೦-೨೧ನೇ ಸಾಲಿನ ಪೂರಕ ಅಂದಾಜು ಯೋಜನೆಯಡಿ ₹೧೮ ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದಿಗೂ ಸಹ ಅಂಗನವಾಡಿ ಕೇಂದ್ರಗಳು ದೇವಸ್ಥಾನ ಮತ್ತು ಸಮುದಾಯ ಭವನಗಳಲ್ಲಿ ನಡೆಯುತ್ತಿವೆ. ಇಂಥ ಕೇಂದ್ರಗಳಿಗೆ ಅನುದಾನ ಲಭ್ಯತೆ ಆಧರಿಸಿ ಸ್ವಂತ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕಾಳಜಿ ವಹಿಸಲಾಗಿದೆ. ಸಮುದಾಯದ ಸಹಭಾಗಿತ್ವದಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಹೆಚ್ಚಿಸುವಲ್ಲಿ ಗಮನ ನೀಡಲಾಗಿದೆ ಎಂದ ಅವರು, ಬಸಾಪುರ ಎಂ. ನಿಡಸಂಗಿ ಗ್ರಾಮದಲ್ಲಿ ರಸ್ತೆ ನಿರ್ಮಾಣ, ಮೂಲಸೌಕರ್ಯ ಕಲ್ಪಿಸಿ ಸರ್ವತೋಮುಖ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ದೊರಕಿಸುವ ಭರವಸೆ ನೀಡಿದರು.

ಗ್ರಾಪಂ ಸದಸ್ಯ ಲಕ್ಷ್ಮಣ ವರ್ದಿ ಮಾತನಾಡಿ, ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕಟ್ಟಡವಿರದೇ ಮಕ್ಕಳು ಸಮಸ್ಯೆ ಅನುಭವಿಸುತ್ತಿದ್ದರು. ಶಾಸಕ ಶ್ರೀನಿವಾಸ ಮಾನೆ ಅವರು ಕಾಳಜಿ ವಹಿಸಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಗ್ರಾಮದ ಅಭಿವೃದ್ಧಿಗೂ ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಯಾಸೀರಖಾನ ಪಠಾಣ, ಸಿಡಿಪಿಒ ರಂಗನಾಥ, ಜಿಪಂ ಅಭಿಯಂತರ ಬಾಬು ಸಾಖರೆ, ಪಿಡಿಒ ರಾಮಣ್ಣ ಹನಕನಹಳ್ಳಿ, ಮಹ್ಮದ್‌ಹನೀಫ್, ಶೇಕಪ್ಪ ಕಮಾಟಿ, ಪ್ರವೀಣ ಹಿರೇಮಠ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.