ಮಾಹಿತಿ ಹಕ್ಕು ಕಾಯ್ದೆ ಉಪಯೋಗ ಮಾಡಿಕೊಳ್ಳಿ- ಸಾಹಿತಿ ನಾರಿನಾಳ್

| Published : Feb 16 2024, 01:46 AM IST

ಸಾರಾಂಶ

ಈ ಕಾಯ್ದೆ ಜಾರಿಯಾದ ಆರಂಭದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ಕಂಡಿತಾದರೂ ನಂತರದ ದಿನಗಳಲ್ಲಿ ಮತ್ತೆ ಅದೇ ಹಳೇ ಕಥೆ ಆರಂಭವಾಗಿದೆ.

ಗಂಗಾವತಿ: ಮಾಹಿತಿ ಹಕ್ಕು ಕಾಯ್ದೆ ಉಪಯೋಗ ಮಾಡಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಸಿ.ಎಚ್. ನಾರಿನಾಳ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‍ನಲ್ಲಿ ಮಾಹಿತಿ ಹಕ್ಕು ಸಂಘಟನೆಯ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಂತರ ಮಾಹಿತಿ ಹಕ್ಕು ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಮಾಹಿತಿ ಹಕ್ಕು ಎಂಬ ಕಾಯ್ದೆ ಜಾರಿಗೆ ತಂದಿರುವುದು ಸಂತಸದ ವಿಷಯ. ಈ ಕಾಯ್ದೆಯ ಅವಶ್ಯಕತೆ ಇತ್ತು ಮತ್ತು ಈ ಕಾಯ್ದೆಯು ಭ್ರಷ್ಟ ಅಧಿಕಾರಿಗಳಿಗೆ ಮೂಗುದಾರದಂತೆ ಕಾರ್ಯ ನಿರ್ವಹಿಸುತ್ತಿದೆ. ಈಗಿನ ಆಡಳಿತ ವ್ಯವಸ್ಥೆಯ ಕಾರ್ಯವೈಖರಿ ತಿಳಿಯಲು ಈ ಕಾಯ್ದೆ ಸಾರ್ವಜನಿಕರಿಗೆ ಬಹಳ ಉಪಯೋಗವಾಗುವಂಥದ್ದು ಎಂದು ಹೇಳಿದರು.

ಈ ಕಾಯ್ದೆ ಜಾರಿಯಾದ ಆರಂಭದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ಕಂಡಿತಾದರೂ ನಂತರದ ದಿನಗಳಲ್ಲಿ ಮತ್ತೆ ಅದೇ ಹಳೇ ಕಥೆ ಆರಂಭವಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅತಿ ಹೆಚ್ಚಾಗಿ ಬಳಸುವ ಮಾಹಿತಿ ಹಕ್ಕು ಹೋರಾಟಗಾರರನ್ನು ಬ್ಲಾಕ್‍ಮೇಲರ್‌ಗಳಂತೆ ಕಾಣಲಾಗುತ್ತಿದೆ. ಅಧಿಕಾರಿ ವರ್ಗಗಳಲ್ಲಿ ಮಾಹಿತಿ ಹಕ್ಕು ಹೋರಾಟಗಾರರನ್ನು ತುಚ್ಛವಾಗಿ ಕಾಣಲಾಗುತ್ತಿದೆ. ಹೀಗಾಗಿ ಈ ಕಾಯ್ದೆ ಸದ್ಯಕ್ಕೆ ನಿರುಪಯುಕ್ತವಾದಂತಿದೆ. ಪ್ರತಿ ಇಲಾಖೆಗೂ ದಿನನಿತ್ಯ ಕನಿಷ್ಠ 100-200 ಮಾಹಿತಿ ಹಕ್ಕು ಅರ್ಜಿಗಳು ಸಲ್ಲಿಕೆಯಾಗುತ್ತವೆ. ನಂತರ ಅರ್ಜಿಗಳು ಕಸದಬುಟ್ಟಿ ಸೇರುತ್ತವೆಯಾ ಎಂಬ ಅನುಮಾನಗಳು ಮೂಡುತ್ತಿವೆ. ಮಾಹಿತಿ ಅರ್ಜಿಗಳ ಉತ್ತರಕ್ಕೆ ಅಥವಾ ವಿಲೇವಾರಿಗೆ 30 ದಿನಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಅಧಿಕಾರಿಗಳು ಅರ್ಜಿಗಳಿಗೆ ಉತ್ತರ ನೀಡದೇ ತಪ್ಪಿಸಿಕೊಳ್ಳಲು ನೆಪ ಮಾಡಿಕೊಂಡಿದ್ದಾರೆ. ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಈ ಮಾಹಿತಿ ಹಕ್ಕು ಸಂಘಟನೆ ಪ್ರಾರಂಭ ಮಾಡುವುದು ತುಂಬ ಒಳ್ಳೆಯ ವಿಷಯ ಎಂದರು.

ಮಾಹಿತಿ ಹಕ್ಕು ಸಂಘಟನೆಯ ರಾಜ್ಯಾಧ್ಯಕ್ಷ ಹೇಮಂತ್ ನಾಗರಾಜು ಉದ್ಘಾಟಿಸಿ ಮಾತನಾಡಿ, ಸಂವಿಧಾನದ ಆಡಳಿತ ಯಂತ್ರದಲ್ಲಿ ಪಾರದರ್ಶಕತೆ ತರಲು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾರ್ವಜನಿಕರ ಸೇವೆಗೆ ಮುಕ್ತವಾಗಿಸಲು ಕೇಂದ್ರ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸಿದೆ. ಈ ಕಾಯ್ದೆ ಸಾರ್ವಜನಿಕರಿಗೆ ಪ್ರಬಲ ಅಸ್ತ್ರ ಇದ್ದಂತೆ. ಇದನ್ನು ಸರಿಯಾಗಿ ಬಳಸಿಕೊಂಡು ಭ್ರಷ್ಟ ಅಧಿಕಾರಿಗಳು ಮಾಡಿದ ಹಗರಣವನ್ನು ಬಯಲಿಗೆ ಎಳೆಯುವಂತಹ ಪ್ರಯತ್ನ ನಿಮ್ಮದಾಗಬೇಕು ಎಂದು ಹಕ್ಕು ಬಳಕೆ ಮಾಡುವ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.ಪದಾಧಿಕಾರಿಗಳ ಆಯ್ಕೆ:ಅಧ್ಯಕ್ಷರಾಗಿ ಪಿ.ಶಿವನಾರಾಯಣ, ಜಿಲ್ಲಾ ಗೌರವಾಧ್ಯಕ್ಷರಾಗಿ ಜುಮ್ಮಣ್ಣ, ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕೆ.ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಂಜುನಾಥ್ ಕಲ್ಮಂಗಿ, ಜಿಲ್ಲಾ ಖಜಾಂಚಿಯಾಗಿ ಮಾರ್ಕಂಡೇಯ ಸೋಮನಾಳ, ಜಿಲ್ಲಾ ಸದಸ್ಯರನ್ನಾಗಿ ಆರ್. ಚನ್ನಬಸವ ಮಾನ್ವಿ, ಜಿಲ್ಲಾ ಮಾಧ್ಯಮ ಸಲೆಹೆಗಾರಾರನ್ನಾಗಿ ಸಿದ್ದನಗೌಡ ಹೊಸಮನಿ ಮತ್ತು ಜಿಲ್ಲಾ ಸಲಹೆ ಸದಸ್ಯರನ್ನಾಗಿ ಚನ್ನಬಸವ ಅವರನ್ನು ನೇಮಕ ಮಾಡಲಾಯಿತು.