ನಿಗದಿತ ಅನುದಾನಗಳನ್ನು ಅದೇ ಉದ್ದೇಶಕ್ಕೇ ಬಳಸಿ

| Published : Apr 08 2025, 12:33 AM IST

ಸಾರಾಂಶ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸದೆ ನಿಗದಿತ ಉದ್ದೇಶಕ್ಕೆ ಬಳಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ಅಧಿಕಾರ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನ ರಾಮ್ ಬದುಕು ತಿಳಿಸಿಕೊಡುತ್ತದೆ ಎಂದರು. ಬಾಬು ಜಗಜೀವನ ರಾಮ್ ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ಬಡವರಿಗೆ ಆಹಾರದ ಕೊರತೆ ದೂರವಾಯಿತು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸದೆ ನಿಗದಿತ ಉದ್ದೇಶಕ್ಕೆ ಬಳಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಡಾ. ಬಾಬು ಜಗಜೀವನರಾಮ್ ೧೧೮ನೇ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಬಾಬು ಜಗಜೀವನರಾಮ್ ಅವರ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದಾಗಿ ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ. ಅಧಿಕಾರ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನ ರಾಮ್ ಬದುಕು ತಿಳಿಸಿಕೊಡುತ್ತದೆ ಎಂದರು.

ಬಾಬು ಜಗಜೀವನರಾಮ್ ಸತತ ೩ ದಶಕಗಳ ಕಾಲ ಕೇಂದ್ರ ಮಂತ್ರಿ ಮಂಡಲದ ಸದಸ್ಯರಾಗಿ ಅಪಾರ ಆಡಳಿತ ಅನುಭವ ಗಳಿಸಿದ್ದರು. ಸಾರಿಗೆ, ಆಹಾರ, ರೈಲ್ವೆ, ಕೃಷಿ ಮತ್ತು ಸಮುದಾಯ ಅಭಿವೃದ್ಧಿ, ಕಾರ್ಮಿಕ ಮತ್ತು ಉದ್ಯೋಗ ಪುನರ್ವಸತಿ ಕೆಲಸವನ್ನು ಮಾಡಿದ ಹಿರಿಮೆ ಅವರದು. ಕೂಲಿ ಮಾಡಿ ಜೀವನ ಸಾಗಿಸಲು ಕಷ್ಟವಾಗಿದ್ದ ಕಾಲಘಟ್ಟದಲ್ಲಿ ಬಾಬು ಜಗಜೀವನ ರಾಮ್ ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ಬಡವರಿಗೆ ಆಹಾರದ ಕೊರತೆ ದೂರವಾಯಿತು ಎಂದರು.

ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಕೆ.ಸಿ.ರಘು, ಎನ್.ಕುಮಾರ್‌ ಉಪನ್ಯಾಸ ನೀಡಿದರು. ತಹಸೀಲ್ದಾರ್ ವಿ.ಎಸ್. ನವೀನ್‌ ಕುಮಾರ್, ಪೊಲೀಸ್ ಉಪ ಅಧೀಕ್ಷಕ ಎನ್.ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಪುರಸಭಾ ಮುಖ್ಯಾಧಿಕಾರಿ ಕೆ.ಎನ್. ಹೇಮಂತ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎನ್. ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪ, ಟಿಎಪಿಸಿಎಂ ಎಸ್‌ನ ಅಧ್ಯಕ್ಷ ಎಂ.ಆರ್.ಅನಿಲ್‌ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಕೆಡಿಪಿ ಸದಸ್ಯ ಮಹೇಶ್ ಕಬ್ಬಾಳು, ದಲಿತ ಮುಖಂಡ ಡಾ. ದಂಡೋರು ಮಂಜುನಾಥ್, ನಾಗೇಶ್, ಬೆಕ್ಕಸ್ವಾಮಿ, ಧರ್ಮಯ್ಯ, ಪ್ರಕಾಶ್, ಯೋಗೇಶ್ ಇದ್ದರು.