ಸಾರಾಂಶ
ಹಾವೇರಿ: ಭೂಮಿ ಮೇಲಿನ ಸಕಲ ಜೀವಿಗಳಿಗೆ ನೀರು ಅಗತ್ಯವಾಗಿ ಬೇಕಾಗಿರುವ ನೈಸರ್ಗಿಕ ಸಂಪನ್ಮೂಲವಾಗಿದೆ. ನೀರನ್ನು ಮಿತವಾಗಿ ಬಳಸುವ ಮೂಲಕ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.
ನಗರದ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಕೃತಿಯ ಭೂ ಭಾಗದಲ್ಲಿ ಶೇ. ೭೦ರಷ್ಟು ನೀರಿನ ಪ್ರದೇಶವಿದ್ದು, ಶೇ. ೩೦ರಷ್ಟು ಮಾತ್ರ ಭೂಮಿ ಇದೆ. ಶೇ. ೭೦ರಷ್ಟು ನೀರಿನ ಪೈಕಿ ಶೇ. ೩ರಷ್ಟು ಮಾತ್ರ ನೀರು ಉಪಯೋಗಕ್ಕೆ ಬರುತ್ತದೆ. ಉಳಿದ ಶೇ. ೬೭ರಷ್ಟು ನೀರಿನ ಪ್ರಮಾಣ ಅನುಪಯುಕ್ತವಾಗಿದೆ. ಶೇ. ೩ರಷ್ಟು ನೀರಿನ ಪ್ರಮಾಣದಲ್ಲಿ ಮಾನವ ಸಂಕುಲ, ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಕುಲಗಳಿಗೆ ಉಪಯೋಗಿಸಲಾಗುತ್ತಿದೆ. ಪ್ರಕೃತಿದತ್ತವಾಗಿ ಲಭ್ಯವಿರುವ ನೀರನ್ನು ವ್ಯರ್ಥವಾಗಿ ಪೋಲು ಮಾಡದೆ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಎಚ್.ಕೆ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಲಕ್ಷ್ಮೀಕಾಂತ ಅವರು ನೀರಿನ ಮಹತ್ವ ಹಾಗೂ ಸದ್ಬಳಕೆ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಸಿಂದಗಿ ಶಾಂತವೀರೇಶ್ವರ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ಸಿ.ಎನ್. ಗೌಡರ ಹಾಗೂ ಎನ್.ಎಸ್.ಎಸ್. ಸಂಯೋಜಕ ಡಾ. ಸಂಗಮೇಶ್ವರ ದೊಡ್ಡಗೌಡರ ಉಪಸ್ಥಿತರಿದ್ದರು.
;Resize=(128,128))
;Resize=(128,128))