ಮಂಗಳೂರು: ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕೌಶಲಾಭಿವೃದ್ಧಿಗೆ ನೆರವು ನೀಡುವ ಹಾಗೂ ಉಚಿತ ವೈದ್ಯಕೀಯ ಸೇವೆ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಿ, ಅಭಿಪ್ರಾಯ ಕ್ರೋಢೀಕರಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.ಮಂಗಳೂರು ಕದ್ರಿಯ ಸರ್ಕ್ಯೂಟ್ ಹೌಸ್ ಸಮೀಪದ ಲಯನ್ಸ್ ಅಶೋಕ ಸೇವಾ ಭವನದಲ್ಲಿ ಮಂಗಳವಾರ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ (ಡಿ.ಎನ್.ಎ.) ಬೆಂಗಳೂರು, ಮಾಯಾ ಪೇರೇಂಟ್ಸ್ ಫಾರ್ ಇನ್ ಕ್ಲುಸಿವ್ ಡೆವಲಪ್ ಮೆಂಟ್ ಬೆಂಗಳೂರು, ಅರಿವು ಆರ್ಲಿ ಇಂಟರ್ವೆನ್ಶನ್ ಸೆಂಟರ್ ಮಂಗಳೂರು ವತಿಯಿಂದ ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರ ಸಹಯೋಗದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಪೋಷಕರ, ಎನ್.ಜಿ.ಒಗಳ ಹಾಗೂ ವೈದ್ಯರ ಸಮಾವೇಶ ಡಿ.ಎನ್.ಎ. ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾನು ಆರೋಗ್ಯ ಸಚಿವನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭವೇ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಆರೋಗ್ಯ ಸೇವೆ ನೀಡುವ ವಿಚಾರಕ್ಕೆ ಸಂಬಂಧಿಸಿ ಸಮಿತಿ ರಚಿಸಿ, ಎಲ್ಲ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಸರಕಾರ ಉಚಿತವಾಗಿ ವೈದ್ಯಕೀಯ ಸೇವೆ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಮಂಗಳೂರಿನಲ್ಲಿ ಪ್ರತ್ಯೇಕ ಪಾರ್ಕ್:

ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಅನುಕೂಲವಾಗುವಂತೆ ಮಂಗಳೂರಿನಲ್ಲಿ ಪ್ರತ್ಯೇಕ ಪಾರ್ಕ್ ಒಂದನ್ನು ಮೀಸಲಿರಿಸುವ ಕುರಿತು ಪೋಷಕರ ಬೇಡಿಕೆಗೆ ಸ್ಪಂದಿಸಿದ ಸಚಿವ ಯು.ಟಿ. ಖಾದರ್, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪ್ರತ್ಯೇಕ ಪಾರ್ಕ್ ಒಂದನ್ನು ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.

ಮಂಗಳೂರು ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ತನ್ನ ವತಿಯಿಂದ ಭಿನ್ನ ಸಾಮರ್ಥ್ಯದ ಮಕ್ಕಳ ನೆರವಿಗೆ ಸಂಬಂಧಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ಡಿಎನ್ಎ ಸಲಹಾ ಸಮಿತಿ ಹಾಗೂ ಮಾಯಾ ಸಿಇಒ ವಿ.ಎಸ್. ಬಸವರಾಜು ಪ್ರಸ್ತುತ ಸನ್ನಿವೇಶದಲ್ಲಿ ಪೋಷಕರು ಹಾಗೂ ಮಕ್ಕಳು ಎದುರಿಸುತ್ತಿರುವ ಸವಾಲುಗಳ ಕುರಿತು ವಿವರಿಸಿದರು.

ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಪಿಯು ಕಾಲೇಜು ಪ್ರಿನ್ಸಿಪಾಲರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ಲಯನ್ಸ್ ಕ್ಲಬ್ ವಿಶೇಷ ಚೇತನ ಮಕ್ಕಳ ಕುರಿತು ಕಾಳಜಿ ಹೊಂದಿದ್ದು, ಭಿನ್ನ ಸಾಮರ್ಥ್ಯದ ಮಕ್ಕಳ ಪುನಶ್ಚೇತನಕ್ಕೆ ಸಂಬಂಧಿಸಿ ಸಾಕಷ್ಟು ಕೆಲಸ ಮಾಡಿದೆ. ಇಂಥ ಕಾರ್ಯಕ್ರಮಗಳಿಗೆ ಲಯನ್ಸ್ ಕ್ಲಬ್ ಸದಾ ಪ್ರೋತ್ಸಾಹ ನೀಡುತ್ತದೆ ಎಂದರು.

ಲಯನ್ಸ್ ಜಿಲ್ಲೆ 317ಡಿ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ, ಲಯನ್ಸ್ ಕ್ಲಬ್ ಅಶೋಕನಗರ ಅಧ್ಯಕ್ಷ ಪ್ರಶಾಂತ್ ಬಿ. ಶೆಟ್ಟಿ, ಮಂಗಳಾ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್ ಚೇರ್ಮನ್ ಡಾ.ಗಣಪತಿ ಪಿ., ಎ.ಜೆ.ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಸೋನ್ಸ್, ಯೆನೆಪೊಯಾ ಡೆಂಟಲ್ ಕಾಲೇಜು ಡೀನ್ ಡಾ. ಶಾಮ್ ಎಸ್. ಭಟ್, ಭಾರತೀ ಸಮೂಹ ಸಂಸ್ಥೆಗಳ ಡಾ.ರಾಜೇಂದ್ರ ಪ್ರಸಾದ್, ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜು ಮುಖ್ಯಸ್ಥೆ ಡಾ. ಅಮರಶ್ರೀ, ಸಿಡಿಪಿಒ ಶ್ವೇತಾ, ರಶ್ಮಿ, ಅರಿವು ಟ್ರಸ್ಟ್ ಅಧ್ಯಕ್ಷ ಡಾ.ಕೆ.ಸುಂದರ ಭಟ್, ಮನಪಾ ಮಾಜಿ ಉಪಮೇಯರ್ ಶಕೀಲಾ ಕಾವ, ಡಿಎನ್‌ಎ ಜಂಟಿ ಕಾರ್ಯದರ್ಶಿ ಹಂಪಣ್ಣ, ಮಾಯಾದ ಟ್ರಸ್ಟಿ ಆಲ್ವಿಟೊ, ಡಿಎನ್ ಎ ಸದಸ್ಯೆ ಸವಿತಾ ಮತ್ತಿತರರು ಇದ್ದರು.

ಅರಿವು ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಆರ್. ಭಟ್ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಅಶೋಕನಗರ ಅಧ್ಯಕ್ಷ ಪ್ರಶಾಂತ್ ಬಿ. ಶೆಟ್ಟಿ ವಂದಿಸಿದರು. ಎಂ.ಆರ್.ಡಬ್ಲ್ಯು ಜಯಪ್ರಕಾಶ್ ನಿರೂಪಿಸಿದರು.