ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪರಿಶಿಷ್ಟ ಜನಾಂಗಕ್ಕೆ ಮೀಸಲಾಗಿರುವ ಅನುದಾನವನ್ನು ರಾಜ್ಯ ಸರ್ಕಾರ ಬೇರೆ ಬೇರೆ ಯೋಜನೆಗಳಿಗೆ ಬಳಸಿಕೊಂಡಿರುವುದರಿಂದ ಪರಿಶಿಷ್ಟ ಜನಾಂಗದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಹೆತ್ತೂರು ಹೋಬಳಿಯ ಹಳ್ಳಿಬೈಲು ಗ್ರಾಮದಲ್ಲಿ ಶಾಸಕರು ನೂತನ ಕಾಂಕ್ರಿಟ್ ರಸ್ತೆಗೆ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾತನಾಡಿ, ತಾಲೂಕಿನ ಹೆತ್ತೂರು ಹೋಬಳಿ ಹಳ್ಳಿಬೈಲು ಗ್ರಾಮವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಶಾಸಕರ ಅನುದಾನ ಸೇರಿ ಒಟ್ಟು ೨೫ ಲಕ್ಷ ರು. ವೆಚ್ಚದ ಕಾಂಕ್ರಿಟ್ ರಸ್ತೆಯನ್ನು ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಪರಿಶಿಷ್ಟ ಜನಾಂಗದ ಕಾಲೋನಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ಮೀಸಲಿರಿಸಲಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ ಎಂದು ತಿಳಿಸಿದರು.ಗ್ಯಾರಂಟಿ ಯೋಜನೆಗಳ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಇರುವ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಯಾವುದೇ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದೇ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪರಿಶಿಷ್ಟಜಾತಿ ಹಾಗೂ ಪಂಗಡಗಳ ಕಾಲೋನಿಗಳ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗಿದ್ದು, ಹಂತ ಹಂತವಾಗಿ ಅನುದಾನದ ಅನುಗುಣವಾಗಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಗ್ರಾಪಂ ಅಧಕ್ಷ ನಾಗರಾಜ, ಗ್ರಾಪಂ ಸದಸ್ಯರಾದ ಪವನ್, ಭಾಗ್ಯ ಬಸವರಾಜು, ಶೋಭಾ ಸುಬ್ರಹ್ಮಣ್ಯ, ಉಮೇಶ್, ರಕ್ಷಿತಾ ಮಂಜುನಾಥ್, ಸುಶ್ಮಿತಾ ಪವನ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಿರ್ಕಳ್ಳಿ ಬಸವರಾಜು, ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಸ್ಟೀವನ್ ಪ್ರಕಾಶ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೇದಕುಮಾರ್, ಬಿಜೆಪಿ ಮುಖಂಡರಾದ ಬಾಚಿಹಳ್ಳಿ ಹರೀಶ್, ನೇತ್ರಾ ಸುರೇಶ್, ಮಹೇಶ್, ರಾಮಚಂದ್ರ ಹೆತ್ತೂರು, ಉಚ್ಚಂಗಿ ರವಿಕುಮಾರ್, ತಾಲೂಕು ಎಸ್.ಸಿ ಮೋರ್ಚಾ ಉಪಾಧ್ಯಕ್ಷ ದಿನೇಶ್ ಐಗೂರು, ಗ್ರಾಮಸ್ಥರಾದ ಕೃತಿಕ್, ಹೃತಿಕ್, ಉಮೇಶ್, ಮಂಜಯ್ಯ, ಈರಯ್ಯ, ನಾಗರಾಜು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.------------