ಸಾರಾಂಶ
ಶಿರಸಿ ನಮ್ಮ ತಾಲೂಕಿನಲ್ಲಿ ೩೨ ಪಂಚಾಯಿತಿಗಳಲ್ಲಿ ೫೭೧ ಕೆರೆಗಳಿದ್ದು, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಐದು ಮಾದರಿ ಕೆಲಸಗಳನ್ನು ನರೇಗಾ ಯೋಜನೆಯಲ್ಲಿ ಕೈಗೆತ್ತಿಕೊಂಡು ಉತ್ತಮ ಕೆಲಸ ನಡೆಸಿದಲ್ಲಿ ತಾಲೂಕಿನ ಅಭಿವೃದ್ಧಿ ಹೆಚ್ಚಾಗಲಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ್ ಹೆಗಡೆ ಹೇಳಿದರು.
ಶಿರಸಿ: ಬಡವರ ಪಾಲಿನ ತುತ್ತಿನ ಚೀಲವನ್ನು ತುಂಬಿಸುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬ ಬಡ ಕುಟುಂಬದವರು ಪಡೆದುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ್ ಹೆಗಡೆ ಹೇಳಿದರು.
ಅವರು ತಾಲೂಕಿನ ಬಿಸಲಕೊಪ್ಪ ಗ್ರಾಪಂ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ನರೇಗಾ ಹಬ್ಬದಲ್ಲಿ ಪಾಲ್ಗೊಂಡು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ತಾಲೂಕಿನಲ್ಲಿ ೩೨ ಪಂಚಾಯಿತಿಗಳಲ್ಲಿ ೫೭೧ ಕೆರೆಗಳಿದ್ದು, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಐದು ಮಾದರಿ ಕೆಲಸಗಳನ್ನು ನರೇಗಾ ಯೋಜನೆಯಲ್ಲಿ ಕೈಗೆತ್ತಿಕೊಂಡು ಉತ್ತಮ ಕೆಲಸ ನಡೆಸಿದಲ್ಲಿ ತಾಲೂಕಿನ ಅಭಿವೃದ್ಧಿ ಹೆಚ್ಚಾಗಲಿದೆ. ಗ್ರಾಮೀಣ ಜನರ ಜೀವನೋಪಾಯ, ಸಂಪತ್ತು ಸಂರಕ್ಷಣೆ ಮತ್ತು ಪುನಶ್ಚೇತನ ಸೇರಿದಂತೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ನೂರು ದಿನಗಳ ಕೂಲಿ ಖಾತ್ರಿ, ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡುವ ಮಹತ್ವಕಾಂಕ್ಷಿ ಯೋಜನೆ ಇದಾಗಿದ್ದು, ಮುಂದೆಯೂ ಪ್ರತಿ ಪಂಚಾಯಿತಿಯ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ನರೇಗಾ ಯೋಜನೆಯಲ್ಲಿ ಅತ್ಯುತ್ತಮ ಸಾಧನೆಗೈದ ಸಿರಸಿ ತಾಲೂಕಿನ ೭ ಗ್ರಾಪಂಗಳಾದ ಬಂಡಲ, ಹುಣಸೇಕೊಪ್ಪ, ಸಾಲ್ಕಣಿ, ಮೇಲಿನ ಓಣಿಕೇರಿ, ಕುಳವೆ, ಕೊಡ್ನಗದ್ದೆ ಮತ್ತು ದೇವನಹಳ್ಳಿ ಪಂಚಾಯಿತಿಗಳ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿಯನ್ನು ಗೌರವಿಸಲಾಯಿತು.
ತಾಪಂ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಿಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಸಲಕೊಪ್ಪ ಗ್ರಾಪಂ ಅಧ್ಯಕ್ಷೆ ಕಿರಣಾ ಭಟ್ಟ, ಉಪಾಧ್ಯಕ್ಷೆ ಭಾರತಿ ಪೂಜಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಶುರಾಮ ಮಳವಳ್ಳಿ ಉಪಸ್ಥಿತರಿದ್ದರು. ಪಿಡಿಒ ಕುಮಾರ್ ವಾಸನ್ ಕಾರ್ಯಕ್ರಮ ನಿರೂಪಿಸಿದರು.