ಸಾರಾಂಶ
ಕನ್ನಡಪ್ರಭ ವಾರ್ತೆ ತ್ಯಾಗರ್ತಿ
ಬಹುಜನರ ಬಹುದಿನದ ಅಪೇಕ್ಷೆಯಂತೆ ತ್ಯಾಗರ್ತಿಯಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ಅನುಷ್ಠಾನಗೊಂಡಿದ್ದು, ಪ್ರತಿಯೊಬ್ಬ ರೈತರು ಈ ಬ್ಯಾಂಕ್‍ನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಾಗರ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು.ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ ಸೋಮವಾರ ಡಿಸಿಸಿ ಬ್ಯಾಂಕ್‍ನ 34ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ ಬ್ಯಾಕೋಡು, ಕಾರ್ಗಲ್, ತ್ಯಾಗರ್ತಿಯಲ್ಲಿ ಶಾಖೆಗಳನ್ನು ತೆರೆಯಲು ಅನುಮತಿ ದೊರೆತಿದ್ದು ತ್ಯಾಗರ್ತಿಯಲ್ಲಿ ಇಂದು ಶಾಖೆ ಉದ್ಘಾಟನೆಯಾಗಿದೆ. ಸಹಕಾರಿ ಕ್ಷೇತ್ರದ ಅನುಭವವಿಲ್ಲದ ನಾನು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ನಮ್ಮ ಸಹಕಾರಿ ಬ್ಯಾಂಕ್‍ಗೆ ಠೇವಣಿ ನೀಡಿ ಎಂದು ಕೇಳುತ್ತಿದ್ದಾರೆ. ರೈತರ ಪರವಾಗಿ ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕೇ ಹೊರತು ವೈಯಕ್ತಿಕ ಉದ್ದೇಶಕ್ಕಲ್ಲ. ಸಹಕಾರಿ ಬ್ಯಾಂಕ್‍ಗಳಿಂದ ಶೇ.3 ರಂತೆ ರೈತರು, ಸ್ವಸಹಾಯ ಸಂಘ, ಮಹಿಳೆಯರು, ಹಾಲು ಉತ್ಪಾದಕರಿಗೆ ಸಾಲ ನೀಡಲಾಗುತ್ತಿದೆ. ಆದರೆ ರೈತರು ಇಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಠೇವಣಿ ಇರಿಸುತ್ತಿದ್ದಾರೆ. ಇದರಿಂದ ರೈತರ ಅಭಿವೃದ್ಧಿಯಾಗದೇ ರಾಷ್ಟ್ರೀಕೃತ ಬ್ಯಾಂಕ್‍ಗಳ ಅಭಿವೃದ್ಧಿಯಾಗುತ್ತಿದೆ. ಸಹಕಾರಿ ಸಂಘದ ಸದಸ್ಯರಾಗಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಹಕಾರಿ ಸಂಘಗಳಲ್ಲಿ ರಾಜಕೀಯ ಹೊರತುಪಡಿಸಿ ಅಭಿವೃದ್ಧಿಯ ಚಿಂತನೆ ಮಾಡಬೇಕಾಗಿದೆ. ಜಿಲ್ಲಾ ಡಿಸಿಸಿ ಬ್ಯಾಂಕ್ 36ಕೋಟಿ 75 ಲಕ್ಷ ಲಾಭಾಂಶಗಳಿಸಿದ್ದು 11ಕೋಟಿ ರು. ಆದಾಯ ತೆರಿಗೆ ನೀಡಲಾಗಿದ್ದರೂ ನಬಾರ್ಡ್‍ನಿಂದ ಕೊಡಬೇಕಾದ 200ಕೋಟಿ ರು. ಗಳನ್ನು ಇದುವರೆಗೂ ನೀಡಿರುವುದಿಲ್ಲ. ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರ ಸೀಮಿತಗೊಳ್ಳದೇ ಕೇಂದ್ರ ಸರ್ಕಾರವೂ ರೈತರ ಬಗ್ಗೆ ಕಾಳಜಿ ವಹಿಸಿ ನಬಾರ್ಡ್‍ನಿಂದ ಬರಬೇಕಾದ ಹಣವನ್ನು ನೀಡಿದರೆ ರೈತರು ಕೇಳಿದಷ್ಟು ಹಣವನ್ನು ನೀಡಬಹುದು. ಸಾಗರದ ಡಿಸಿಸಿ ಬ್ಯಾಂಕ್‍ನಲ್ಲಿ ಸುಮಾರು 26,766 ಗ್ರಾಹಕರನ್ನು ಹೊಂದಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ 3286 ಮಹಿಳಾ ಸ್ವಸಹಾಯ ಸಂಘಗಳಿಗೆ 154.44ಕೋಟಿ ಸಾಲವನ್ನು ನೀಡಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಶೇ.3 ಹಾಗೂ ಶೇ0 ದರದಲ್ಲಿ ಸಾಲ ನೀಡಲು ಅವಕಾಶವಿದ್ದು, ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರು ಡಿಸಿಸಿ ಬ್ಯಾಂಕ್‍ನ 34ನೇ ಶಾಖೆಯನ್ನು ಉದ್ಘಾಟಿಸಿದರು. ತ್ಯಾಗರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಟಿ.ಕೆ.ಹನುಮಂತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಿ.ಆರ್.ಜಯಂತ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪರಮೇಶ್, ದಶರಥ್ ಗಿರಿ, ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ರಾಜಣ್ಣ ರೆಡ್ಡಿ, ತ್ಯಾಗರ್ತಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಪ್ರಭಾವತಿ ಲೋಕಪ್ಪ, ಬರೂರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ರಮೇಶ್, ಇಡುವಳ್ಳಿ ಚರ್ಚ್‍ನ ಧರ್ಮಗುರು ಥಾಮಸ್, ತ್ಯಾಗರ್ತಿ ವಿಎಸ್‍ಎಸ್‍ಎನ್ ಉಪಾಧ್ಯಕ್ಷರಾದ ಕಿರಣ್ ದೊಡ್ಮನೆ, ಹಾಗೂ ಹಲವಾರು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.