ಉತ್ತರ ಕನ್ನಡ ಬಿಜೆಪಿಯ ಭದ್ರಕೋಟೆ: ಆರ್.ಕೆ. ಸಿದ್ದರಾಮಣ್ಣ

| Published : Jan 30 2025, 12:34 AM IST

ಸಾರಾಂಶ

ಪ್ರತಿ ಮೂರು ವರ್ಷಕ್ಕೆ ಒಮ್ಮೆ ಪಕ್ಷದಿಂದ ಸಂಘಟನಾ ಪರ್ವ ನಡೆಯುತ್ತದೆ. ಜಿಲ್ಲಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕೆಲ ತಿಂಗಳುಗಳ ಹಿಂದೆಯೇ ನಡೆಯಬೇಕಿತ್ತಾದರೂ ವಿಧಾನಸಭೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಡವಾಗಿದೆ.

ಶಿರಸಿ: ಬಿಜೆಪಿ ಸದಸ್ಯತ್ವ ಅಭಿಯಾನ ದೇಶಾದ್ಯಂತ ವೇಗವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿಯೂ ಆನ್‌ಲೈನ್ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಈಗಾಗಲೇ ಜಿಲ್ಲೆಯಲ್ಲಿ ೧.೬೫ ಲಕ್ಷ ಸದಸ್ಯರು ಆನ್‌ಲೈನ್ ಮೂಲಕ ಸದಸ್ಯತ್ವ ಪಡೆದಿದ್ದಾರೆ. ಮೊಬೈಲ್ ನೆಟ್‌ವರ್ಕ್ ಇರದ ಗ್ರಾಮೀಣ ಪ್ರದೇಶಗಳಲ್ಲಿ ಆಫ್‌ಲೈನ್ ಮೂಲಕ ಸದಸ್ಯತ್ವ ಮಾಡಲಾಗಿದ್ದು, ಈ ಮಾದರಿಯಲ್ಲಿ ೫ ಸಾವಿರ ಜನ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಚುನಾವಣಾ ಉಸ್ತುವಾರಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ ತಿಳಿಸಿದರು.ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಎನ್.ಎಸ್. ಹೆಗಡೆ ಕರ್ಕಿ ಘೋಷಿಸಿದ ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ನಮ್ಮ ದೇಶದಲ್ಲಿ ರಾಷ್ಟ್ರೀಯ ಪಕ್ಷವಾಗಿ ನಾವೂ ಆಂತರಿಕ ಪ್ರಜಾಪ್ರಭುತ್ವ ಅಳವಡಿಸಿಕೊಂಡಿದ್ದೇವೆ. ಪಕ್ಷ ಸಂಘಟನೆಯಲ್ಲಿ ಈ ವ್ಯವಸ್ಥೆ ಮಹತ್ತರ ಪಾತ್ರ ವಹಿಸಿದೆ.

ಪ್ರತಿ ಮೂರು ವರ್ಷಕ್ಕೆ ಒಮ್ಮೆ ಪಕ್ಷದಿಂದ ಸಂಘಟನಾ ಪರ್ವ ನಡೆಯುತ್ತದೆ. ಜಿಲ್ಲಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕೆಲ ತಿಂಗಳುಗಳ ಹಿಂದೆಯೇ ನಡೆಯಬೇಕಿತ್ತಾದರೂ ವಿಧಾನಸಭೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಡವಾಗಿದೆ. ಉತ್ತರ ಕನ್ನಡ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿದೆ ಎಂದರು.ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕಾಂಗ್ರೆಸ್ ದೇಶವಿರೋಧಿ ಹೇಳಿಕೆ ನೀಡುತ್ತಲೇ ಬಂದಿದ್ದು, ಬಹುಸಂಖ್ಯಾತರ ಭಾವನೆಗಳನ್ನು ಸದಾ ಧಿಕ್ಕರಿಸಿದೆ. ಮುಂಬರುವ ದಿನಗಳಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಮೂಲೆಗುಂಪು ಮಾಡಲಿದ್ದಾರೆ ಎಂದರು.

ನೂತನ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನನಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದರು. ಕಳೆದ ಒಂದು ವರ್ಷದಲ್ಲಿ ಪ್ರತಿ ಮಂಡಳದಲ್ಲಿ ತಂಡ ರಚಿಸಿ ಎಲ್ಲ ಒಟ್ಟಾಗಿ ಪಕ್ಷ ಬಲ ಪಡಿಸಿದ್ದೇವೆ. ನಮ್ಮ ಬೂತ್ ಮಟ್ಟದ ಕಾರ್ಯಕರ್ತರಿಂದ ಎಲ್ಲ ಕಾರ್ಯಕರ್ತರು, ಜನಪ್ರತಿನಿಧಿಗಳು ಮುಂದೆಯೂ ಇದೇ ರೀತಿ ಸಹಕಾರ ನೀಡಬೇಕು ಎಂದರು.ಪ್ರಮುಖರಾದ ಆನಂದ ಸಾಲೇರ, ಆರ್.ಡಿ. ಹೆಗಡೆ, ವಿವೇಕಾನಂದ ವೈದ್ಯ, ಎಂ.ಜಿ. ನಾಯ್ಕ, ಗುರುಪ್ರಸಾದ ಹೆಗಡೆ ಹರ್ತೆಬೈಲ್ ಇತರರಿದ್ದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ ನಡೆಯಲಿರುವ ಹಿನ್ನೆಲೆ ಉತ್ತರ ಕನ್ನಡದಿಂದ ಪ್ರತಿನಿಧಿಯಾಗಿ ಆನಂದ ಸಾಲೇರ ಅವರನ್ನು ಆಯ್ಕೆ ಮಾಡಲಾಯಿತು.