ಸಾರಾಂಶ
ಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖಗಳ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ಸಿನಿಂದ ಡಾ.ಅಂಜಲಿ ನಿಂಬಾಳ್ಕರ್ ನಡುವೆ ಇಲ್ಲಿ ನೇರಹಣಾಹಣಿ ಏರ್ಪಟ್ಟಿದೆ.
ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಉತ್ತರ ಕನ್ನಡ ಕ್ಷೇತ್ರದಲ್ಲಿ ಈಚಿನ ದಶಕಗಳಲ್ಲಿ ಬಿಜೆಪಿಯದ್ದೇ ಪಾರುಪತ್ಯ ನಡೆದುಕೊಂಡು ಬಂದಿದೆ. ಈ ಹಿಂದೆ ಘಟಾನುಘಟಿಗಳಾದ ಶಿವರಾಮ ಕಾರಂತ, ಅನಂತನಾಗ್, ಆರ್.ವಿ.ದೇಶಪಾಂಡೆ, ಮಾರ್ಗರೆಟ್ ಆಳ್ವ ಮತ್ತಿತರರಿಗೇ ಸೋಲಿನ ರುಚಿ ತೋರಿಸಿದ ಕ್ಷೇತ್ರವಿದು. ಕಾಂಗ್ರೆಸ್ಸಿನ ದೇವರಾಯ ನಾಯ್ಕ ನಾಲ್ಕು ಬಾರಿ, ಬಿಜೆಪಿಯ ಅನಂತಕುಮಾರ ಹೆಗಡೆ ಆರು ಬಾರಿ ಗೆದ್ದು ಬೀಗಿದ್ದಾರೆ. ಸತತ ಗೆಲುವಿನ ನಾಗಾಲೋಟದಲ್ಲಿದ್ದ ಅನಂತ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು, ಈ ಬಾರಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕಿಳಿದಿದ್ದಾರೆ.
ಹೊರಗಿನವರು: ಕಾಂಗ್ರೆಸ್ಸಿನ ಅಂಜಲಿ ನಿಂಬಾಳ್ಕರ್ ಅವರಿಗೆ ಉತ್ತರ ಕನ್ನಡ ಜಿಲ್ಲೆ ಹೊಸದು. ಈ ಜಿಲ್ಲೆಯೊಂದಿಗೆ ಅವರಿಗೆ ಯಾವುದೇ ನೇರ ನಂಟಿಲ್ಲ. ಡಾ.ಅಂಜಲಿ ಅವರು ಉತ್ತರ ಕನ್ನಡ ಲೋಕಸಭೆ ಕ್ಷೇತ್ರದವರೇ ಆಗಿದ್ದರೂ ಜಿಲ್ಲೆಯ ಹೊರಗಡೆಯವರಾಗಿರುವುದರಿಂದ ಜಿಲ್ಲೆಯ ಜನತೆ ಹೇಗೆ ಸ್ಪೀಕರಿಸುತ್ತಾರೆ ಅನ್ನುವುದೇ ಕುತೂಹಲ. ಡಾ.ಅಂಜಲಿ ಪ್ರಚಾರಕ್ಕೆ ಹೋದಾಗೆಲ್ಲ ನಾನು ಈ ಕ್ಷೇತ್ರದವಳು ಎಂದು ಹೇಳಿಕೊಳ್ಳಬೇಕಾಗಿದೆ.
ಇನ್ನು ಕಾಗೇರಿ ಅವರದು ಕ್ಷೇತ್ರದಲ್ಲಿ ಪರಿಚಿತ ಮುಖ. ಆದರೆ ಲೋಕಸಭೆ ಚುನಾವವಣೆಗೆ ಅವರು ಧುಮುಕುತ್ತಿರುವುದು ಇದೇ ಮೊದಲು. ಸಂಸದ ಅನಂತ ಹೆಗಡೆಗೆ ಈ ಬಾರಿ ಟಿಕೆಟ್ ನಿರಾಕರಿಸುತ್ತಿದ್ದಂತೆ ಹೆಗಡೆ ರಾಜಕೀಯ ಮೌನಕ್ಕೆ ಜಾರಿದ್ದು, ಅವರ ಕೆಲ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಾಗೇರಿ ವಿರುದ್ಧವೇ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಅದೇ ರೀತಿ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಪುತ್ರನ ಜತೆ ಬೆಂಬಲಿಗರನ್ನು ಕಾಂಗ್ರೆಸ್ಸಿಗೆ ಕಳುಹಿಸಿದ್ದು ಅವರ ಬೆಂಬಲ ಸಿಗುವುದು ಅನುಮಾನ. ಇಂಥ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಗೆಲ್ಲುವುದು ಕಾಗೇರಿ ಅವರಿಗೆ ಸವಾಲು.
ಕಾಗೇರಿ ಅವರು ಪ್ರಧಾನಿ ಮೋದಿ ಅವರ ಜನಪ್ರಿಯತೆ, ಕೇಂದ್ರ ಸರ್ಕಾರದ ಯೋಜನೆಗಳನ್ನೇ ಬಂಡವಾಳವನ್ನಾಗಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದರೆ, ಅಂಜಲಿ ಕಾಂಗ್ರೆಸ್ಸಿನ ಗ್ಯಾರಂಟಿಯನ್ನೇ ನೆಚ್ಚಿಕೊಂಡು ಪ್ರಚಾರದಲ್ಲಿ ನಿರತರಾಗಿದ್ದಾರೆ.
ವಿಧಾನಸಭಾ ಕ್ಷೇತ್ರಗಳು: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ 6 ಹಾಗೂ ಬೆಳಗಾವಿ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಹಳಿಯಾಳ, ಶಿರಸಿ, ಕಾರವಾರ ಹಾಗೂ ಭಟ್ಕಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಯಲ್ಲಾಪುರ ಹಾಗೂ ಕುಮಟಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಬಿಜೆಪಿ ಶಾಸಕರಿದ್ದರೆ, ಕಿತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಒಟ್ಟು 8 ವಿಧಾನಸಭೆ ಕ್ಷೇತ್ರಗಳಲ್ಲಿ 5ರಲ್ಲಿ ಕಾಂಗ್ರೆಸ್ ಹಾಗೂ 3ರಲ್ಲಿ ಬಿಜೆಪಿ ಶಾಸಕರಿದ್ದಾರೆ.
ಅಭ್ಯರ್ಥಿಗಳು: ಕಾಂಗ್ರೆಸ್‌ನ ಡಾ.ಅಂಜಲಿ ನಿಂಬಾಳ್ಕರ್, ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲದೆ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಗಣಪತಿ ಹೆಗಡೆ, ಕರ್ನಾಟಕ ರಾಷ್ಟ್ರ ಸಮಿತಿಯ ವಿನಾಯಕ ಮಂಗೇಶ ನಾಯ್ಕ್, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಾಜಿ ಪಾಟೀಲ್, ಚಿದಾನಂದ ಹನುಮಂತಪ್ಪ ಹರಿಜನ, ನಿರಂಜನ್ ಉದಯಸಿನ್ಹಾ ಸರದೇಸಾಯಿ, ನಾಗರಾಜ ಅನಂತ ಶಿರಾಲಿ, ಅರವಿಂದ ಗೌಡ, ಅವಿನಾಶ್ ನಾರಾಯಣ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ರಾಜಶೇಖರ ಶಂಕರ ಹಿಂಡಲಗಿ ಕಣದಲ್ಲಿದ್ದಾರೆ.ಮತದಾರರ ವಿವರ:ಒಟ್ಟು ಮತದಾರರು: 16,22,857 ಲಕ್ಷಮಹಿಳೆಯರು- 8,07,242 ಲಕ್ಷ
ಪುರುಷರು- 8,15,599 ಲಕ್ಷತೃತೀಯ ಲಿಂಗಿಗಳು- 16
ಜಾತಿವಾರು ಮತದಾರರ ವಿವರ
ಕ್ಷೇತ್ರದಲ್ಲಿ ನಾಮಧಾರಿ(ಈಡಿಗ) ಮತದಾರರು ಸುಮಾರು ಒಟ್ಟು 2 ಲಕ್ಷದಷ್ಟು ಇದ್ದಾರೆ. ಬ್ರಾಹ್ಮಣ-1.80 ಲಕ್ಷ, ಒಕ್ಕಲಿಗರು(ಹಾಲಕ್ಕಿ, ಕರೆಒಕ್ಕಲಿಗ)- 1.10 ಲಕ್ಷ, ಮರಾಠ-2.20 ಲಕ್ಷ, ಅಲ್ಪಸಂಖ್ಯಾತರು(ಮುಸ್ಲಿಂ, ಕ್ರಿಶ್ಚಿಯನ್)- 3 ಲಕ್ಷ, ಮೀನುಗಾರ- 80 ಸಾವಿರ, ದಲಿತ/ ಎಸ್‌ಸಿ, ಎಸ್‌ಟಿ, ಬುಡಕಟ್ಟು- 2 ಲಕ್ಷ, ಲಿಂಗಾಯತ- 1 ಲಕ್ಷ, ಮಡಿವಾಳ- 38 ಸಾವಿರ, ಕೋಮಾರಪಂಥ- 35 ಸಾವಿರ, ದೈವಜ್ಞ ಬ್ರಾಹ್ಮಣ- 40 ಸಾವಿರ, ಭಂಡಾರಿ- 40 ಸಾವಿರ ಮತ್ತು ಇತರೆ ಸಮುದಾಯದವರು 79, 857ರಷ್ಟಿದ್ದಾರೆ.ಅಭ್ಯರ್ಥಿಗಳ ಪರಿಚಯ
ಡಾ. ಅಂಜಲಿ ನಿಂಬಾಳ್ಕರ್(ಕಾಂಗ್ರೆಸ್)
ಡಾ. ಅಂಜಲಿ ನಿಂಬಾಳ್ಕರ್ ಹಿಂದೆ ಖಾನಾಪುರ ಶಾಸಕರಾಗಿದ್ದರು. ಆದರೆ 2023ರ ಚುನಾವಣೆಯಲ್ಲಿ ಸೋಲನುಭವಿಸಿದರು. ವೈದ್ಯರಾಗಿರುವ ಅವರು ಖಾನಾಪುರ ಹಾಗೂ ಕಿತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಪರಿಚಿತರು. ಉತ್ತರ ಕನ್ನಡ ಜಿಲ್ಲೆಗೆ ಹೊಸಮುಖ. ಇಲ್ಲಿನ ಭೌಗೋಳಿಕ ಪರಿಸ್ಥಿತಿ, ಸಮಸ್ಯೆಗಳು, ವಿವಿಧ ಜನಾಂಗಗಳು, ಜಿಲ್ಲೆಯ ನಾಡಿಮಿಡಿತವನ್ನು ಅರಿತುಕೊಳ್ಳುವ ಸವಾಲು ನಿಂಬಾಳ್ಕರ್ ಅವರಿಗಿದೆ. ಜಿಲ್ಲೆಯಲ್ಲಿನ ಕಾಂಗ್ರೆಸ್ ಶಾಸಕರು, ಮುಖಂಡರನ್ನು ಅವಲಂಬಿಸಿಕೊಂಡು ಅವರು ಚುನಾವಣೆ ಎದುರಿಸಬೇಕಾಗಿದೆ. ಮರಾಠಾ ಸಮಾಜಕ್ಕೆ ಸೇರಿರುವ ಇವರು ಕ್ಷೇತ್ರದಲ್ಲಿ ಬಹುಸಂಖ್ಯಾತರಾದ ಮರಾಠಾ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಶಾಸಕರ ನಡುವೆ ತಾಳಮೇಳ ಇಲ್ಲದಿರುವುದು ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ತಲೆನೋವಿನ ವಿಚಾರ.--
ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ)
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಟ್ಟು ಆರು ಬಾರಿ ಶಾಸಕರಾಗಿದ್ದರು. (ಮೂರು ಸಲ ಅಂಕೋಲಾ ಹಾಗೂ ಮೂರು ಸಲ ಶಿರಸಿ ಕ್ಷೇತ್ರ) ಆದರೆ 2023ರ ಚುನಾವಣೆಯಲ್ಲಿ ಸೋಲನುಭವಿಸಿದರು. ಶಿಕ್ಷಣ ಸಚಿವರಾಗಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಧಾನಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸರಳತೆ ಹಾಗೂ ಸಜ್ಜನಿಕೆ ಇವರನ್ನು ಜನರಿಗೆ ಹತ್ತಿರವಾಗಿಸಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಚಿರಪರಿಚಿತರು. ಹವ್ಯಕ ಬ್ರಾಹ್ಮಣರಾದ ಇವರು ಬಹುಸಂಖ್ಯಾತರಾದ ಬ್ರಾಹ್ಮಣ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. 2019ರ ಫಲಿತಾಂಶ
ಅನಂತಕುಮಾರ ಹೆಗಡೆ (ಬಿಜೆಪಿ) 786,042 ಮತ
ಆನಂದ್ ಅಸ್ನೋಟಿಕರ್ (ಜೆಡಿಎಸ್) 306,393 ಮತ