ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಸಿದ್ಧತೆ

| Published : Feb 12 2024, 01:32 AM IST

ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಡಿಸ್ಟಿಕ್ ಎಕ್ಸಪೆಂಡಿಚರ್ ಮಾನಿಟರಿಂಗ್ ಸೆಲ್ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ಇಡಲಿದೆ. ಡಿಸಿ, ಸಿಇಒ, ಜಿಲ್ಲಾ ಖಜಾನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಇರುತ್ತಾರೆ. ಡಿಸ್ಟಿಕ್ ಎಕ್ಸಪೆಂಡಿಚರ್ ಮಾನಿಟರಿಂಗ್ ಕಮಿಟಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ನಿಗಾ ಇಟ್ಟು ವ್ಯತ್ಯಾಸವಾಗಿದ್ದು ಕಂಡು ಬಂದರೆ ಮಾನಿಟರಿಂಗ್ ಸೆಲ್‌ಗೆ ಮಾಹಿತಿ ರವಾನಿಸುತ್ತದೆ

ಕಾರವಾರ: ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದ್ದು, ಉತ್ತರ ಕನ್ನಡ ಜಿಲ್ಲಾಡಳಿತದಿಂದ ಚುನಾವಣೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣೆ ಸುಗಮ,ನಿಷ್ಪಕ್ಷಪಾತವಾಗಿ ನಡೆಯಲು ವಿವಿಧ ತಂಡ ಈಗಾಗಲೇ ರಚನೆ ಮಾಡಿಕೊಳ್ಳಲಾಗಿದೆ.

ಮಾದರಿ ನೀತಿ ಸಂಹಿತೆ (ಎಂಸಿಸಿ) ಅನುಷ್ಠಾನಕ್ಕೆ ಸಂಬಂಧ ಪಟ್ಟು೧೬ ಜನ, ಡಿಸ್ಟಿಕ್ ಎಕ್ಸಪೆಂಡಿಚರ್ ಮಾನಿಟರಿಂಗ್ ಸೆಲ್(ಡಿಇಎಂಸಿ) ೪ ಜನ, ಡಿಸ್ಟಿಕ್ ಎಕ್ಸಪೆಂಡಿಚರ್ ಮಾನಿಟರಿಂಗ್ ಕಮಿಟಿಯಲ್ಲಿ ೫, ಮಿಡಿಯಾ ಸರ್ಟಿಫಿಕೇಶನ್ ಮಾನಿಟರಿಂಗ್ ಕಮಿಟಿ ೫, ಮಿಡಿಯಾ ಫ್ರೀ ಸರ್ಟಿಫಿಕೇಶನ್ ಸೆಲ್ ೪, ಡಿಸ್ಟಿಕ್ ಕಂಪ್ಲೇಂಟ್ ಮಾನಿಟರಿಂಗ್ ಸೆಲ್ ೫, ಕ್ಯಾಶ್ ರಿಟ್ರಸಲ್ ಕಮಿಟಿ ೩, ಮಿಡಿಯಾ ಮಾನೆಟರಿಂಗ್ ಸೆಲ್ ೪, ಅಸಿಸ್ಟೆಂಟ್ ಎಕ್ಸಪೆಂಡಿಚರ್ ಆಬ್ಸರ್ವರ್ ೬ ಜನ, ಅವರಿಗೆ ಕಂಪ್ಯೂಟರ್ ಆಪರೇಟ್‌, ಸಹಾಯಕರು ಸೇರಿ ೧೮ ಜನ, ವಿಡಿಯೋ ವಿವಿಂಗ್ ಟೀಮ್ ೬ ಅಧಿಕಾರಿಗಳು ಹಾಗೂ ಸಹಾಯಕರು ೧೮, ವಿಎಸ್‌ಟಿ ಸರ್ವೆಲೆನ್ಸ್ ಟೀಂ ೨೫, ಸೆಕ್ಟರ್ ಆಫಿಸರ್ ೧೪೬, ಫ್ಲೈಯಿಂಗ್ ಸ್ಕಾಡ್ ೫೧, ಸ್ಟಾಟಿಕ್ ಸರ್ವೆಲೆನ್ಸರ್ ಟೀಂ ೭೮ ಜನರ ತಂಡ ರಚನೆ ಮಾಡಲಾಗಿದೆ.

ಈ ಎಲ್ಲ ಮುಖ್ಯ ಸಮಿತಿ ಸೇರಿ ಅಂದಾಜು ೪೦೦ ಜನರು ಕರ್ತವ್ಯ ನಿರ್ವಹಿಸಲಿದ್ದು, ಇದಲ್ಲದೇ ಮಸ್ಟರಿಂಗ್, ಡಿ-ಮಸ್ಟರಿಂಗ್, ಮತದಾನ, ಮತ ಎಣಿಕೆ ಒಳಗೊಂಡು ಮೊದಲಾದ ಕೆಲಸಕ್ಕೆ ೭ಸಾವಿರ ಜನ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮಿತಿ ಕೆಲಸವೇನು?:

ಡಿಸ್ಟಿಕ್ ಎಕ್ಸಪೆಂಡಿಚರ್ ಮಾನಿಟರಿಂಗ್ ಸೆಲ್ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ಇಡಲಿದೆ. ಡಿಸಿ, ಸಿಇಒ, ಜಿಲ್ಲಾ ಖಜಾನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಇರುತ್ತಾರೆ. ಡಿಸ್ಟಿಕ್ ಎಕ್ಸಪೆಂಡಿಚರ್ ಮಾನಿಟರಿಂಗ್ ಕಮಿಟಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ನಿಗಾ ಇಟ್ಟು ವ್ಯತ್ಯಾಸವಾಗಿದ್ದು ಕಂಡು ಬಂದರೆ ಮಾನಿಟರಿಂಗ್ ಸೆಲ್‌ಗೆ ಮಾಹಿತಿ ರವಾನಿಸುತ್ತದೆ. ಮಿಡಿಯಾ ಸರ್ಟಿಫಿಕೇಶನ್ ಮಾನಿಟರಿಂಗ್ ಕಮಿಟಿಯು ಎಲ್ಲ ರೀತಿಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಯು ಚುನಾವಣೆಗೆ ಸಂಬಂಧಿಸಿದ ಜಾಹಿರಾತು ಪ್ರಕಟಿಸಲು ಪೂರ್ವಾನುಮತಿ ನೀಡುತ್ತದೆ.ಮಿಡಿಯಾ ಫ್ರೀ ಸರ್ಟಿಫಿಕೇಶನ್ ಸೆಲ್ ಅಭ್ಯರ್ಥಿಗಳು ಪೂರ್ವಾನುಮತಿ ಪಡೆದು ಜಾಹಿರಾತು ನೀಡಿದ್ದಾರೆಯೇ? ಎಂದು ಪರಿಶೀಲಿಸುವ ಕೆಲಸವಾಗಿದೆ. ಡಿಸ್ಟಿಕ್ ಕಂಪ್ಲೇಂಟ್ ಮಾನಿಟರಿಂಗ್ ಸೆಲ್ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ದೂರು ನೀಡುವ ಸಮಿತಿಯಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಗೆಯಾದ ಬಳಿಕ ಒಬ್ಬ ವ್ಯಕ್ತಿ ಇಷ್ಟು ಮೊತ್ತದ ಹಣ ತೆಗೆದುಕೊಂಡು ಹೋಗಬಹುದು ಎಂದು ಇರುತ್ತದೆ. ಯಾರೇ ಆಯೋಗ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಹಣ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದರೆ ಕ್ಯಾಶ್ ರಿಟ್ರಸಲ್ ಕಮಿಟಿಯು ಆ ಹಣವನ್ನು ಜಪ್ತು ಮಾಡಿಕೊಳ್ಳುತ್ತದೆ. ಬಳಿಕ ಆ ವ್ಯಕ್ತಿ ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ನೀಡಿದರೆ ಹಣ ವಾಪಸ್ ಮರಳಿಸುತ್ತದೆ. ಮಿಡಿಯಾ ಮಾನೆಟರಿಂಗ್ ಸೆಲ್ ಪೇಡ್ ನ್ಯೂಸ್, ಜಾಹಿರಾತು ಇತ್ಯಾದಿ ಬಗ್ಗೆ ಗಮನ ಇಡುತ್ತದೆ. ವಿಎಸ್‌ಟಿ ಸರ್ವೆಲೆನ್ಸ್ ಟೀಂ ಅಭ್ಯರ್ಥಿ ಪ್ರಚಾರಕ್ಕೆ ಹೋದಾಗ ಆ ವಿಡಿಯೋ ಚಿತ್ರೀಕರಣ ಮಾಡುತ್ತದೆ. ವಿಡಿಯೋ ವಿವಿಂಗ್ ಟೀಮ್ ಆ ವಿಡಿಯೋಗಳನ್ನು ಪರಿಶೀಲಿಸಿ ಅಭ್ಯರ್ಥಿಯ ಆ ಕಾರ್ಯಕ್ರಮದ ವೆಚ್ಚ ನಿರ್ಧರಿಸುತ್ತದೆ.

ಚುನಾವಣೆ ಸುಗಮವಾಗಿ ನಡೆಸಲು ಮೊದಲೇ ತಂಡಗಳನ್ನು ರಚಿಸಿಕೊಳ್ಳಲಾಗುತ್ತದೆ. ಚುನಾವಣಾ ಆಯೋಗವು ಚುನಾವಣೆ ಘೋಷಣೆ ಮಾಡುತ್ತಿದ್ದಂತೆ ಈ ಎಲ್ಲ ಸಮಿತಿಗಳು ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತವೆ.