ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸಿದ್ಧತೆ

| Published : Mar 20 2025, 01:16 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾ. 21ರಿಂದ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು. ಈ ಬಾರಿಯ ಪರೀಕ್ಷೆಗೆ ಜಿಲ್ಲೆಯ 125 ಸರ್ಕಾರಿ, 150 ಅನುದಾನಿತ, 92 ಅನುದಾನ ರಹಿತ, 25 ವಸತಿ ಶಾಲೆಗಳ ಒಟ್ಟು 20,035 ವಿದ್ಯಾರ್ಥಿಗಳು ಪರೀಕ್ಷೆಗಳು ಹಾಜರಾಗಲಿದ್ದು, ಒಟ್ಟು 74 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.

ಕಾರವಾರ: ಜಿಲ್ಲೆಯಲ್ಲಿ ಮಾ. 21ರಿಂದ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಪರೀಕ್ಷೆಗೆ ಜಿಲ್ಲೆಯ 125 ಸರ್ಕಾರಿ, 150 ಅನುದಾನಿತ, 92 ಅನುದಾನ ರಹಿತ, 25 ವಸತಿ ಶಾಲೆಗಳ ಒಟ್ಟು 20,035 ವಿದ್ಯಾರ್ಥಿಗಳು ಪರೀಕ್ಷೆಗಳು ಹಾಜರಾಗಲಿದ್ದು, ಒಟ್ಟು 74 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಯಾವುದೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇಲ್ಲ. ಎಲ್ಲ ಪರೀಕ್ಷಾ ಕೊಠಡಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ರಾಜ್ಯ ಮತ್ತು ಜಿಲ್ಲಾ ಹಂತಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. ಎಲ್ಲ ಸಿಸಿ ಕ್ಯಾಮೆರಾಗಳ ವೆಬ್ ಕಾಸ್ಟಿಂಗ್‌ನ್ನು ಡ್ರೈ ರನ್ ಮಾಡಲಾಗಿದ್ದು, ಜಿಪಂನಲ್ಲಿ ಇದಕ್ಕಾಗಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪ್ರಶ್ನೆಪತ್ರಿಕೆಗಳನ್ನು ಸ್ವೀಕರಿಸಿದ್ದು, ತಾಲೂಕು ಖಜಾನೆಗಳಲ್ಲಿ ಪೊಲೀಸ್ ಭದ್ರತೆಯಲ್ಲಿ ಇಡಲಾಗಿದೆ ಎಂದರು.

ಈಗಾಗಲೇ ನಡೆದಿರುವ ಪೂರ್ವಭಾವಿ ಪರೀಕ್ಷೆಯಲ್ಲಿ ಶೇ. 35ಕ್ಕಿಂತ ಕಡಿಮೆ ಅಂಕ ಪಡೆದಿದ್ದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ, ಹೆಚ್ಚು ಅಂಕಗಳನ್ನು ಪಡೆಯುವ ಕುರಿತಂತೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಪರೀಕ್ಷೆಯಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಪರೀಕ್ಷಾ ಅವ್ಯವಹಾರಗಳನ್ನು ತಡೆಗಟ್ಟಲು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಮತ್ತು ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆ ಸಾಗಾಟಕ್ಕೆ ಪೊಲೀಸ್ ಸಿಬ್ಬಂದಿ ನೇಮಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ವೀಕ್ಷಕರು, ವಿಚಕ್ಷಕ ದಳ, ಮಾರ್ಗಾಧಿಕಾರಿಗಳು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್, ಸ್ಥಾನಿಕ ಜಾಗೃತದಳ, ಕೊಠಡಿ ಮೇಲ್ವಿಚಾರಕರು ಮೊಬೈಲ್ ಸ್ವಾಧೀನಾಧಿಕಾರಿಗಳು ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ವೀಕ್ಷಕರುಗಳನ್ನು ನೇಮಕ ಮಾಡಿದ್ದು, ಅವರಿಗೆ ಅಗತ್ಯ ತರಬೇತಿ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯ ಎಲ್ಲ ಝರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಸೆಂಟರ್‌ಗಳು ಮುಚ್ಚುವ ಬಗ್ಗೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಪ್ರಶ್ನೆಪ್ರತಿಕೆ ಸೋರಿಕೆ ಬಗ್ಗೆ ಸುಳ್ಳು ವದಂತಿ ಹಬ್ಬಿಸುವವರ, ವಾಟ್ಸ್‌ಆ್ಯಪ್‌ಗಳಲ್ಲಿ ನಕಲು ಪ್ರಶ್ನೆಪ್ರತಿಕೆಗಳನ್ನು ಪ್ರಕಟಿಸುವುದು, ಇನ್ನಿತರ ಕುಚೋದ್ಯ ಚಟುವಟಿಕೆಗೆ ಅವಕಾಶವಾಗದಂತೆ ನಿಗಾವಹಿಸಿ ಕಾನೂನು ರೀತ್ಯಾ ಕ್ರಮವಹಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಷಿಯಲ್ ಮೀಡಿಯಾ ಘಟಕ ನಿರಂತರವಾಗಿ ಪರಿಶೀಲಿಸುತ್ತಿದೆ ಎಂದರು.

ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಾಕಷ್ಟು ಒಆರ್‌ಎಸ್‌ ಪ್ಯಾಕೆಟ್‌ಗಳನ್ನು ಪೂರೈಸಲಾಗಿದೆ. ಪರೀಕ್ಷಾ ದಿನದಂದು ವಿದ್ಯುತ್ ವ್ಯತ್ಯಯವಾಗದಂತೆ ಹಾಗೂ ಪರೀಕ್ಷಾ ದಿನಾಂಕ ಮತ್ತು ಪರೀಕ್ಷಾ ದಿನಾಂಕಗಳ ಹಿಂದಿನ ದಿನಗಳಲ್ಲಿಯೂ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮವಹಿಸಲು ಹೆಸ್ಕಾಂಗೆ ಸೂಚಿಸಿದ್ದು, ಸಾರಿಗೆ ವತಿಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಹಾಗೂ ಪರೀಕ್ಷೆ ಬರೆದ ಆನಂತರ ಮನೆಗೆ ತೆರಳಲು ಅನುಕೂಲವಾಗುವಂತೆ ಸರ್ಕಾರಿ ಬಸ್‌ಗಳನ್ನು

ನಿಗದಿತ ಸಮಯಕ್ಕೆ ಬಿಡುವಂತೆ ಮತ್ತು ಅಗತ್ಯವಿರುವ ಕಡೆಗಳಲ್ಲಿ ಹೆಚ್ಚವರಿ ಬಸ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡವನ್ನು ಸಮರ್ಥವಾಗಿ ಎದುರಿಸಿ ಪರೀಕ್ಷೆ ಬರೆಯುವ ಕುರಿತಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಖುದ್ದು ಶಾಲೆಗೆ ಭೇಟಿ ನೀಡಿ, ಅವರಿಗೆ ಆತ್ಮವಿಶ್ವಾಸ ಮೂಡಿಸಿ, ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಯವಂತೆ ಪ್ರೇರೇಪಿಸಲಾಗಿದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿಡಿಪಿಐ ಲತಾ ನಾಯಕ ಇದ್ದರು.