ಸಾರಾಂಶ
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೆಚ್ಚಲು ಕೊಯ್ದ ಪ್ರಕರಣ, ನಂಜನಗೂಡಿನಲ್ಲಿ ಹಸುವಿನ ಬಾಲ ಕತ್ತರಿಸಿದ ಪ್ರಕರಣ ಬಿಸಿ ಆರುವ ಮುನ್ನವೇ ಇದೀಗ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಗಬ್ಬದ ಆಕಳು ಕಡಿದು, ಗರ್ಭದಿಂದ ಕರು ತೆಗೆದು ಬಿಸಾಡಿ, ಮಾಂಸ ಹೊತ್ತೊಯ್ದ ಅಮಾನವೀಯ ಕೃತ್ಯ ನಡೆದಿದೆ.
ಹೊನ್ನಾವರ : ರಾಜ್ಯದಲ್ಲಿ ಹಸುವಿನ ಮೇಲೆ ದುರುಳರ ಕ್ರೌರ್ಯ ಮುಂದುವರಿದಿದ್ದು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೆಚ್ಚಲು ಕೊಯ್ದ ಪ್ರಕರಣ, ನಂಜನಗೂಡಿನಲ್ಲಿ ಹಸುವಿನ ಬಾಲ ಕತ್ತರಿಸಿದ ಪ್ರಕರಣ ಬಿಸಿ ಆರುವ ಮುನ್ನವೇ ಇದೀಗ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಗಬ್ಬದ ಆಕಳು ಕಡಿದು, ಗರ್ಭದಿಂದ ಕರು ತೆಗೆದು ಬಿಸಾಡಿ, ಮಾಂಸ ಹೊತ್ತೊಯ್ದ ಅಮಾನವೀಯ ಕೃತ್ಯ ನಡೆದಿದೆ.
ಕೃಷ್ಣಾಚಾರಿ ಎಂಬುವವರಿಗೆ ಸೇರಿದ ಗೋವನ್ನು ಈ ರೀತಿಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಸುಗಳನ್ನು ಈ ರೀತಿಯಲ್ಲಿ ವಿಕೃತವಾಗಿ ಹತ್ಯೆ ಮಾಡುವ ಸರಣಿ ಪರಿಪಾಠ ಮುಂದುವರೆದಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ದಿನಕರ್ ಶೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಖ್ಯಮಂತ್ರಿ ಸಿದ್ರಾಮುಲ್ಲ ಖಾನ್ ಆಗಿದ್ದಾರೆ. ಗೃಹ ಇಲಾಖೆ ನಾಚಿಕೆಗೇಡಿಯಾಗಿದೆ. ಹಿಂದೂಗಳ ಸಂಸ್ಕೃತಿಗೆ ಪದೇ ಪದೆ ಧಕ್ಕೆ ತರುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಏನಾಯ್ತು?:
ಸಾಲ್ಕೊಡ ಗ್ರಾಮದ ಕೃಷ್ಣಾಚಾರಿ ಎಂಬುವವರಿಗೆ ಸೇರಿದ ಗೋವು ಶುಕ್ರವಾರ ಮೇಯಲು ಹೋಗಿದ್ದು ಮರಳಿ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಶನಿವಾರ ಸಮೀಪದ ಪ್ರದೇಶದಲ್ಲಿ ಹುಡುಕಾಡಿದ ವೇಳೆ ದನವನ್ನು ಹತ್ಯೆ ಮಾಡಿದ್ದು ಕಂಡುಬಂದಿದೆ. ಹತ್ಯೆ ಮಾಡಿದ ಸ್ಥಳದಲ್ಲಿ ದನದ ತಲೆ ಒಂದು ಕಡೆ, ಕಾಲುಗಳು ಮತ್ತೊಂದು ಕಡೆ ಪತ್ತೆಯಾಗಿದೆ. ಜೊತೆಗೆ ಗರ್ಭ ಧರಿಸಿದ್ದ ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಕೂಡಾ ಹತ್ಯೆ ದಾರುಣವಾಗಿ ಹತ್ಯೆ ಮಾಡಿ ಅದನ್ನು ಅಲ್ಲೇ ಎಸೆದು ದನದ ಮಾಂಸವನ್ನು ಕೊಂಡೊಯ್ದಿದ್ದಾರೆ.
ದೂರು:
ಈ ಸಂಬಂಧ ಅವರು ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ 10 ವರ್ಷಗಳಿಂದ ನಾನು ಸಾಕಿದ್ದ ಕಪ್ಪು ಬಣ್ಣದ ಆಕಳನ್ನು ಜ. 18 ರಿಂದ 19ರ ನಡುವಿನ ಅವಧಿಯಲ್ಲಿ ಕಳವು ಮಾಡಿ ಅದನ್ನು ಸಾಯಿಸಿ ಗರ್ಭದಲ್ಲಿದ್ದ ಕರು ಸ್ಥಳದಲ್ಲಿ ಬಿಟ್ಟು ಆಕಳಿನ ಮಾಂಸ ತೆಗೆದುಕೊಂಡು ಹೋಗಿದ್ದಾರೆ ಎಂದು ಕೃಷ್ಣ ಆಚಾರಿ ದೂರಿನಲ್ಲಿ ತಿಳಿಸಿದ್ದಾರೆ.
ನೋವು ಸಹಿಸಲಾಗಲ್ಲ:
ಶ್ರೀಮತಿ ಆಚಾರಿ ಮಾತನಾಡಿ, ಆಕಳು ನಾಪತ್ತೆಯಾದಾಗಲೆಲ್ಲ ಚಿರತೆ ತಿಂದಿರಬಹುದೆಂದುಕೊಳ್ಳುತ್ತಿದ್ದೆವು. ಆದರೆ, ಈ ರೀತಿ ಹತ್ಯೆ ಮಾಡುತ್ತಾರೆ ಎನ್ನುವ ಕಲ್ಪನೆ ಇರಲಿಲ್ಲ. ಪ್ರೀತಿಯಿಂದ ಸಾಕಿ-ಸಲುಹಿದ ಗೋವುಗಳು ಈ ರೀತಿ ಕಟುಕರ ಕೈಯಿಂದ ಪ್ರಾಣ ಕಳೆದುಕೊಂಡಿರುವುದನ್ನು ನೋಡಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಶಾಸಕ ಶೆಟ್ಟಿ ಭೇಟಿ:
ವಿಷಯ ತಿಳಿದು ಘಟನಾ ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ, ಆಕಳ ಮಾಲೀಕರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಲೋಲ-ಕಲ್ಲೋಲ ವಾತಾವರಣ ನಿರ್ಮಾಣವಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ರಾಮುಲ್ಲ ಖಾನ್ ಆಗಿದ್ದಾರೆ. ಗೃಹ ಇಲಾಖೆ ನಾಚಿಕೆಗೇಡಿಯಾಗಿದೆ. ಹಿಂದೂಗಳ ಸಂಸ್ಕೃತಿಗೆ ಪದೇ ಪದೆ ಧಕ್ಕೆ ತರುವ ಕೆಲಸ ಆಗುತ್ತಿದೆ ಎಂದು ಆಪಾದಿಸಿದರು.
ಬೆಂಗಳೂರಿನಲ್ಲಿ ಗೋವಿನ ಕೆಚ್ಚಲು ಕಡಿದ ಆರೋಪಿ ಮಾನಸಿಕ ಅಸ್ವಸ್ಥ ಎಂದು ಗೃಹಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹಿಂದೂಗಳ ಭಾವನೆ ಧಕ್ಕೆ ತರುವ ಕೆಲಸ ಮಾಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಈ ಕೃತ್ಯವನ್ನು ಖಂಡಿಸುತ್ತೇವೆ. ಬೆಂಗಳೂರಿನಲ್ಲಿ ಗೋವಿನ ಅಮಾನುಷ ಕೃತ್ಯ ನಡೆದ ನಂತರ ಸಚಿವ ಜಮೀರ್ ಅಹಮದ್ ₹3 ಲಕ್ಷ ಹಣ ನೀಡಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಿದರು. ಇಲ್ಲಿಯೂ ಅಂತಹ ಘಟನೆ ನಡೆಯುವುದು ಬೇಡ. ಆ ಕುಟುಂಬಕ್ಕೆ ನಾವೆಲ್ಲರೂ ಸೇರಿ ಆರ್ಥಿಕ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.