ಸಾರಾಂಶ
ಕನ್ನಡಪ್ರಭ ವಾರ್ತೆ ಕಾರವಾರ
ದೇಶದಲ್ಲಿ ಅಪಮಾನಗೊಂಡ ಸಾಕಷ್ಟು ಸಂಕೇತಗಳಿವೆ. ಅದನ್ನು ಕಿತ್ತುಹಾಕುವ ತನಕ ಹಿಂದೂ ಸಮಾಜ ವಿರಮಿಸಲ್ಲ. ರಣಭೈರವ ಎದ್ದಾಗಿದೆ, ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಸಾವಿರ ವರ್ಷಗಳ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ. ಸೇಡು ತೀರಿಸಿಕೊಳ್ಳದಿದ್ದರೆ ಇದು ಹಿಂದು ರಕ್ತವೇ ಅಲ್ಲ. ಇದನ್ನು ಬೆದರಿಕೆ ಅಂತ ಬೇಕಾದರೂ ತಿಳಿದುಕೊಳ್ಳಿ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.ಕುಮಟಾದಲ್ಲಿ ಶನಿವಾರ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದ ಅವರು, ಭಟ್ಕಳದ ಚಿನ್ನದ ಪಳ್ಳಿ ಮಸೀದಿ ಹಿಂದೆ ಹಿಂದೂ ದೇವಾಲಯವಾಗಿತ್ತು. ಶಿರಸಿಯ ಸಿಪಿ ಬಜಾರ್‌ನಲ್ಲಿರುವ ದೊಡ್ಡ ಮಸೀದಿ ವಿಜಯ ವಿಠ್ಠಲ ದೇವಸ್ಥಾನ ಆಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನ ಆಗಿತ್ತು. ಈಗ ಹೋದರೂ ಅಲ್ಲಿ ಮಾರುತಿ ಮೂರ್ತಿ ಕಾಣುತ್ತದೆ. ದೇಶದ, ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡ ಸಂಕೇತಗಳಿವೆ. ಅದನ್ನು ಕಿತ್ತುಹಾಕುವ ತನಕ ಹಿಂದೂ ಸಮಾಜ ವಿರಮಿಸಲ್ಲ. ಇದು ಹಿಂದೂ ಸಮಾಜದ ತೀರ್ಮಾನ, ಅನಂತ ಕುಮಾರ್ ಹೆಗಡೆಯದ್ದಲ್ಲ. ರಣ ಭೈರವ ಎದ್ದಾಗಿದೆ, ಮತ್ತೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ಸಾವಿರ ವರ್ಷದ ಸೇಡು. ಈ ಸೇಡು ತೀರಿಸಿಕೊಳ್ಳದಿದ್ದರೆ ಇದು ಹಿಂದೂ ರಕ್ತವಲ್ಲ ಎಂದರು.
ನಮ್ಮದು ಋಣವಿಟ್ಟುಕೊಂಡಿರುವ ಸಮಾಜವಲ್ಲ. ಸಾವಿರ ವರ್ಷಗಳ ಋಣವಿದೆ. ಅದನ್ನು ತೀರಿಸದೇ ಸುಮ್ಮನೆ ಕೂತರೆ ಅದಕ್ಕೆ ಹಿಂದೂ ರಕ್ತ ಎಂದು ಕರೆಯೋದೇ ಇಲ್ಲ. ರಾಮಮಂದಿರದೊಂದಿಗೆ ಇವೆಲ್ಲ ಆರಂಭವಾಗಿದೆ ಎಂದರು.ಹೊಡೆತ ನೀಡಬೇಕು: ಇಡೀ ಹಿಂದೂ ಸಮಾಜವನ್ನು ಜಾತಿ, ಪ್ರಾದೇಶಿಕ, ಭಾಷೆ ಹೆಸರಿನಲ್ಲಿ ಒಡೆದರು. ಮೂರ್ಖರಾಮಯ್ಯನಂಥವರು ಇನ್ನೂ ಒಡೆಯುತ್ತಲೇ ಇದ್ದಾರೆ. ಆದರೂ ಈಗ ಹಿಂದೂ ಸಮಾಜ ಒಟ್ಟಾಗಿ ನಿಂತುಕೊಂಡಿದೆ. ಈ ಬಾರಿ ನಮ್ಮ ಗೆಲುವು ಹೇಗಿರಬೇಕೆಂದರೆ ಅದನ್ನು ಮುಂದೆ ಅಳಿಸಲು ನಮ್ಮಿಂದನೂ ಆಗಬಾರದು. ಹೊಡೆದ ಹೊಡೆತ ಹೇಗಿರಬೇಕೆಂದರೆ ಪುನರ್ ಜನ್ಮವೂ ಸಿಗಬಾರದು. ಆ ರೀತಿಯ ಹೊಡೆತ ನಮ್ಮ ವಿರೋಧಿಗಳಿಗೆ ಆಗಬೇಕು ಎಂದು ಗುಡುಗಿದರು.
ನಮ್ಮ ವಿರೋಧಿ ಕಾಂಗ್ರೆಸ್ ಅಲ್ಲ:ನಮ್ಮ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊರತು ಕಾಂಗ್ರೆಸ್ ಅಲ್ಲ. ಕಾಂಗ್ರೆಸ್‌ಗೆ ನಮ್ಮನ್ನು ವಿರೋಧ ಮಾಡುವ ತಾಕತ್ತೂ ಇಲ್ಲ. ಗತಿಗೆಟ್ಟ ಮಾನಸಿಕತೆ, ಅಲ್ಪಸಂಖ್ಯಾತರ ಓಟಿಗೆ ಹರಾಜಾಗಿ ಹೋಗಿರುವ ಮಾನಸಿಕತೆಗೆ ನಮ್ಮ ವಿರೋಧವಿದೆ. ಪ್ರಜಾಪ್ರಭುತ್ವದಲ್ಲಿ ಒಂದು ಪಕ್ಷ ಬರುತ್ತೆ, ಹೋಗುತ್ತೆ. ನಾಳೆ ನಾವೂ ಶಾಶ್ವತವಾಗಿ ಇರುವುದಿಲ್ಲ. ಮತ್ತೊಂದು ಪಕ್ಷ ಬಂದೇ ಬರುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಮೊದಲು ರಾಮಜನ್ಮ ಭೂಮಿ ಆಹ್ವಾನ ಪತ್ರಿಕೆ ನಮಗೆ ಬಂದಿಲ್ಲ ಅಂದರು. ಆ ಮೇಲೆ ಆಹ್ವಾನ ಬಂದರೂ ನಾವು ಹೋಗಲ್ಲ ಅಂದರು. ಈಗ ಅಯೋಧ್ಯೆಗೆ ಹೋಗ್ತೇನೆ ಎಂದು ಹೇಳುತ್ತಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು. ಕೇವಲ 8 ದಿನಗಳಲ್ಲಿ ಇವರ ಧ್ವನಿ ಬದಲಾಯ್ತು ಎಂದು ಮುಖ್ಯಮಂತ್ರಿ ಹೆಸರೆತ್ತದೆ ಹೆಗಡೆ ಕಿಡಿಕಾರಿದರು.ಇಂದಿರಾ ಕುಟುಂಬದ ಸಾವಿಗೆ ಸಂತರ ಶಾಪ ಕಾರಣ: ಹೆಗಡೆಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ನಡೆದ ಗೋ ಹತ್ಯೆ ನಿಷೇಧ ಆಂದೋಲನದಲ್ಲಿ ಗೋಲಿಬಾರ್ ನಡೆದು ಸಾಧು ಸಂತರೂ ಮೃತಪಟ್ಟರು. ಗೋವುಗಳನ್ನೂ ಸಾಯಿಸಲಾಯಿತು. ನಂತರ ಗೋಪಾಷ್ಠಮಿ ದಿನದಂದೇ ಇಂದಿರಾ ಗಾಂಧಿ, ಸಂಜಯ ಗಾಂಧಿ ಮೃತಪಟ್ಟರು. ಸಂತರೊಬ್ಬರ ಶಾಪದ ಪರಿಣಾಮವಾಗಿ ಹೀಗಾಯಿತು ಎಂದು ಹೆಗಡೆ ಹೇಳಿದ್ದಾರೆ.