ವಿ.ಸಿ.ನಾಲಾ ರೈತರು ನೀರು ನಿರ್ವಹಣೆಯಲ್ಲಿ ಮುಂಜಾಗ್ರತೆ ವಹಿಸಬೇಕು: ಮಂಗಲ ಎಂ.ಯೋಗೀಶ್

| Published : Sep 29 2024, 01:31 AM IST

ವಿ.ಸಿ.ನಾಲಾ ರೈತರು ನೀರು ನಿರ್ವಹಣೆಯಲ್ಲಿ ಮುಂಜಾಗ್ರತೆ ವಹಿಸಬೇಕು: ಮಂಗಲ ಎಂ.ಯೋಗೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ಕಡಿಮೆಯಾಗಿದೆ. ವಾಡಿಕೆ ಮಳೆ ಬಾರದ ಕಾರಣ ಒಂದು ಬೆಳೆಗೆ ಸೀಮಿತವಾಗುವ ಲಕ್ಷಣವಿತ್ತು. ಆದರೆ, ಅದೂ ಕೈಗೆಟುಕುತ್ತಿಲ್ಲ ಎಂಬ ಆತಂಕ ಮನೆ ಮಾಡಿದೆ. ಬೆಳೆ ಪದ್ಧತಿಗಳಲ್ಲಿ ಮಾರ್ಪಾಡು ಮಾಡಿಕೊಂಡು ನೀರಿನ ಮಿತ ಬಳಕೆ ಕಾಯ್ದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ವಿ.ಸಿ.ನಾಲಾ ವ್ಯಾಪ್ತಿ ರೈತರು ನೀರು ನಿರ್ವಹಣೆಯಲ್ಲಿ ಮುಂಜಾಗ್ರತೆ ವಹಿಸಬೇಕು ಎಂದು ಕೃಷ್ಣರಾಜಸಾಗರ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ನಿರ್ದೇಶಕ ಮಂಗಲ ಎಂ.ಯೋಗೀಶ್ ತಿಳಿಸಿದರು.

ತಾಲೂಕಿನ ಮಂಗಲ ಗ್ರಾಮದಲ್ಲಿ ಪ್ರಸಕ್ತ ಸಾಲಿನ ನೀರು ಬಳಕೆದಾರರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿ, ವಿ.ಸಿ.ನಾಲಾ ಭಾಗದ ರೈತರುಗಳಿಗೆ ಮುಂಗಾರು ಬೆಳೆ ಕೈ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ ಎಂದರು.

ಮಳೆ ಕಡಿಮೆಯಾಗಿದೆ. ವಾಡಿಕೆ ಮಳೆ ಬಾರದ ಕಾರಣ ಒಂದು ಬೆಳೆಗೆ ಸೀಮಿತವಾಗುವ ಲಕ್ಷಣವಿತ್ತು. ಆದರೆ, ಅದೂ ಕೈಗೆಟುಕುತ್ತಿಲ್ಲ ಎಂಬ ಆತಂಕ ಮನೆ ಮಾಡಿದೆ. ಬೆಳೆ ಪದ್ಧತಿಗಳಲ್ಲಿ ಮಾರ್ಪಾಡು ಮಾಡಿಕೊಂಡು ನೀರಿನ ಮಿತ ಬಳಕೆ ಕಾಯ್ದುಕೊಳ್ಳಬೇಕು ಎಂದರು.

ವಿಸಿ ನಾಲಾ ಭಾಗದ ವಿತರಣೆ ನಾಲೆ ಮತ್ತು ಶಾಖಾ ನಾಲೆಗಳ ಕಡೇ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಸರಾಗವಾಗಿ ಹೋಗಲು ನಾಲಾ ಸ್ವಚ್ಛತೆ ಅನಿವಾರ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಕೊನೇ ಭಾಗದ ರೈತರು ತುಂಬಾ ಸಂಕಷ್ಟ ಅನುಭವಿಸುವಂತಾಗಿದೆ ಎಂದರು.

ಸರ್ಕಾರ ಮತ್ತು ನೀರು ಬಳಕೆದಾರರ ಸಂಘಗಳು ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ತಜ್ಞತೆ ಬೆಳೆಸಿಕೊಳ್ಳಲು ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಧಾರವಾಡದ ನೆಲ ಮತ್ತು ಜಲ ನಿರ್ವಹಣಾ ಸಂಸ್ಥೆಗೆ ಮಂಗಲ ನೀರು ಬಳಕೆದಾರರ ಸಹಕಾರ ಸಂಘದ 50 ಮಂದಿ ಭಾಗವಹಿಸಿ ಸಂಘಗಳಲ್ಲಿ ಆಡಳಿತ, ಅಭಿವೃದ್ಧಿ ಮತ್ತು ನೀರು ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದೆ. ಇದರ ತರಬೇತಿ ವಿಷಯವನ್ನು ಅರ್ಥೈಸಿಕೊಂಡು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು ಎಂದರು.

ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಶ್ ಮಾತನಾಡಿ, 2024-25ನೇ ಸಾಲಿನಲ್ಲಿ ನಾಲಾ ದುರಸ್ಥಿತಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು. ಈ ವಿತರಣಾ ನಾಲೆಗೆ 140 ಕ್ಯುಸೆಕ್ ನೀರನ್ನು ರೈತರಿಗಾಗಿ ಹರಿಸಲಾಗುತ್ತಿದೆ. ವಾರಾಬಂದಿ ಕಟ್ಟು ಪದ್ಧತಿಯಲ್ಲಿ ನೀಡುತ್ತಿರುವುದರಿಂದ ನೀರು ನಿರ್ವಹಣೆ ಬಗ್ಗೆ ವಿಶೇಷ ಕಾಳಜಿ ತೋರಬೇಕಿದೆ ಎಂದರು.

ಕಾಡಾ ಮತ್ತು ಕಾವೇರಿ ನೀರಾವರಿ ನಿಗಮದ ವತಿಯಿಂದ ಆಗುವ ಕೆಲಸಗಳ ಬಗ್ಗೆ ಕ್ರಿಯಾ ಯೋಜನೆ ಮಾಡಲಾಯಿತು. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಇ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಕೆಂಚೇಗೌಡ, ಎಂ.ಜೆ. ಗಿರೀಶ್, ಎಂ.ಸಿ. ರವಿಕುಮಾರ್, ಲೀಲಾ, ಚಂದ್ರಶೇಖರ್, ರೇಖಾ, ಸಹಾಯಕ ಇಂಜಿನಿಯರ್ ಪ್ರವೀಣ್, ಕಾರ್ಯದರ್ಶಿ ಎಂ.ಬಿ. ಸುರೇಶ್ ಇತರರು ಭಾಗವಹಿಸಿದ್ದರು.