ಸಾರಾಂಶ
ಬಸವ ಕೇಂದ್ರದ ನುಡಿ ನಮನ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದು ಯಾಪಲಪರವಿ ಕಂಬನಿ
ಕನ್ನಡಪ್ರಭ ವಾರ್ತೆ, ಬೀದರ್
ರಾಜ್ಯಾದ್ಯಂತ ಪ್ರವಾಸ ಮಾಡಿ ವಚನ ಸಾಹಿತ್ಯ ಪ್ರಚಾರ ಮಾಡಿ ಸುಮಾರು 30 ವರ್ಷಗಳ ಕಾಲ ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕರಾಗಿ ಸೇವೆ ಮಾಡಿದ್ದ ವ್ಹಿ. ಸಿದ್ದರಾಮಣ್ಣ ಅವರು ಲಿಂಗೈಕ್ಯರಾಗಿದ್ದು ಬಸವ ಅನುಯಾಯಿಗಳಿಗೆ ಅಘಾತವನ್ನುಂಟು ಮಾಡಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಸಿದ್ದು ಯಾಪಲಪರವಿ ಕಂಬನಿ ಮಿಡಿದರು.ಬಸವ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ವಿದ್ಯಾನಗರದಲ್ಲಿ ಲಿಂ.ವ್ಹಿ.ಸಿದ್ದರಾಮಣ್ಣ ಅವರ ನುಡಿ ನಮನದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಮೂಢನಂಬಿಕೆ, ಕಂದಾಚಾರ, ಪ್ರಾಣಿ ಬಲಿ ಎಂಬ ಅವೈಜ್ಞಾನಿಕ ವಿಚಾರದಿಂದ ಸಿಡಿದು ಬಂದು ಲಿಂಗಾನಂದ ಮಹಾಸ್ವಾಮಿಗಳಿಂದ ಪ್ರಭಾವಿತರಾಗಿದ್ದವರು ಎಂದು ತಿಳಿಸಿದರು.
ಸಿದ್ದರಾಮಣ್ಣ ಅವರು ನೇರ ನಿಷ್ಠುರ, ಸ್ಪಷ್ಟತೆಯುಳ್ಳವರು. ಹತ್ತಾರು ಪುಸ್ತಕ ಬರೆದು, ಸ್ವತಃ ವಚನಗಳಿಗೆ ರಾಗ ಸಂಯೋಜನೆ ಮಾಡಿದವರು. ಹವ್ಯಾಸಿ ಕಲಾವಿದರು ಅವರ ‘ಶರಣ ನನ್ನಯ್ಯ’ ನಾಟಕ ರಾಜ್ಯದಲ್ಲಿ ಮನೆ ಮಾತಾಗಿತ್ತು ಎಂದು ನುಡಿದರು.ಹುಲಸೂರು ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಮಗೂ ಸಿದ್ಧರಾಮಣ್ಣನವರಿಗೂ 40 ವರ್ಷಗಳ ನಂಟಿದೆ. ಅವರು ಈ ನಾಡಿನ ಶ್ರೇಷ್ಠ ಬಸವ ಹೃದಯವಂತರಾಗಿದ್ದರು. ಶರಣ ಕಮ್ಮಟ ಆಯೋಜಿಸುವದು, ನಿತ್ಯ ಒಬ್ಬರೇ ಅನುಭವ ಮಂಟಪದಲ್ಲಿ ಪ್ರಾರ್ಥನೆ ಮಾಡುವ ಪರಿಪಾಠ ತಮ್ಮದಾಗಿಸಿಕೊಂಡವರು ಎಂದು ಸ್ಮರಿಸಿದರು.
ಬಸವ ಕೇಂದ್ರದ ಅಧ್ಯಕ್ಷರಾದ ಶರಣಪ್ಪ ಮಿಠಾರೆ ಅಧ್ಯಕ್ಷತೆವಹಿಸಿದ್ದರು. ಶಿವದಾಸ ಸ್ವಾಮಿ, ಶಿವಾನಿ ಸ್ವಾಮಿ, ಕವಿತಾ ಸ್ವಾಮಿ ಅವರು ಪೂಜ್ಯರ ಹಲವು ಗೀತೆಗಳನ್ನು ಹಾಡಿದರು. ರಾಜಮ್ಮ ಚಿಕ್ಕಪೇಟೆ, ಪಂಚಯ್ಯ ಸ್ವಾಮಿ ಸಹ ತಮ್ಮ ನುಡಿ ನಮನ ಸಲ್ಲಿಸಿದರು. ಶಿವಪುತ್ರಪ್ಪ ಪಾಟೀಲ್ ನಿರೂಪಿಸಿದರೆ, ಶಿವಶಂಕರ ಟೋಕರೆ ಸ್ವಾಗತಿಸಿದರೆ ವೀರೂಪಾಕ್ಷ ದೇವರು ವಂದಿಸಿದರು.