ರೋಡ್ ಶೋ ಮೂಲಕ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ

| Published : Apr 04 2024, 01:03 AM IST

ಸಾರಾಂಶ

ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ಮೂಲಕ ಎನ್.ಡಿ.ಎ. ಅಭ್ಯರ್ಥಿ ವಿ. ಸೋಮಣ್ಣ ಅವರು ಬುಧವಾರ ನಾಮಪತ್ರ ಸಲ್ಲಿಸುವ ಮೂಲಕ ಕಲ್ಪತರು ನಾಡಿನಲ್ಲಿ ಚುನಾವಣಾ ಅಖಾಡಕ್ಕೆ ರಂಗು ಬಂದಂತಾಗಿದೆ.

ಕನ್ನಡಪ್ರಭ ವಾರ್ತೆ, ತುಮಕೂರುಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ಮೂಲಕ ಎನ್.ಡಿ.ಎ. ಅಭ್ಯರ್ಥಿ ವಿ. ಸೋಮಣ್ಣ ಅವರು ಬುಧವಾರ ನಾಮಪತ್ರ ಸಲ್ಲಿಸುವ ಮೂಲಕ ಕಲ್ಪತರು ನಾಡಿನಲ್ಲಿ ಚುನಾವಣಾ ಅಖಾಡಕ್ಕೆ ರಂಗು ಬಂದಂತಾಗಿದೆ.ಬುಧವಾರ ಬೆಳಗ್ಗೆ ತುಮಕೂರಿನ ಗಣಪತಿ ಹಾಗೂ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಬೃಹತ್ ರೋಡ್ ಶೋ ಗೆ ಚಾಲನೆ ನೀಡಲಾಯಿತು. ತೆರೆದ ವಾಹನದಲ್ಲಿ ಸೋಮಣ್ಣ ಜೊತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಮಾಜಿ ಸಚಿವ ಹಾಗೂ ಶಾಸಕ ಜನಾರ್ದನರೆಡ್ಡಿ, ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶಬಾಬು ಸಾಥ್ ನೀಡಿದರು.ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷದ ಧ್ವಜಗಳನ್ನು ಪ್ರದರ್ಶಿಸುತ್ತಾ ಜೈಕಾರ ಹಾಕುತ್ತಿದ್ದರು. ಮೆರವಣಿಗೆ ಅರ್ಧನಾರೀಶ್ವರ ದೇವಸ್ಥಾನದಿಂದ ಆರಂಭವಾಗಿ ಟೌನ್ ಹಾಲ್, ಎಂ.ಜಿ. ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿತು. ಅಲ್ಲಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೇರ್ಪಡೆಯಾಗಿ ನಾಮಪತ್ರ ಸಲ್ಲಿಸಲಾಯಿತು.ನಾಮಪತ್ರ ಸಲ್ಲಿಸುವ ವೇಳೆ ಸೋಮಣ್ಣಗೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ಹಾಲಿ ಸಂಸದ ಜಿ.ಎಸ್. ಬಸವರಾಜು ಸಾಥ್ ನೀಡಿದರು. ಬೃಹತ್ ಮೆರವಣಿಗೆ ಬಳಿಕ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿದ ಸೋಮಣ್ಣ ಹಾಗೂ ಎರಡೂ ಪಕ್ಷಗಳ ನಾಯಕರು ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ತುಮಕೂರು ಲೋಕಸಭಾ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಿಂದ ಎರಡೂ ಪಕ್ಷಗಳ ಕಾರ್ಯಕರ್ತರು ಆಗಮಿಸಿದ್ದರಿಂದ ಟ್ರಾಫಿಕ್ ಜಾಮ್ ಕೂಡ ಆಯಿತು. ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಿದ್ದರಿಂದ ಕೆಲ ಕಾಲ ಜನರು ಪರದಾಡು ವಂತಾಯಿತು.ಕುಮಾರಸ್ವಾಮಿ ಅವರು ತಡವಾಗಿ ಆಗಮಿಸಿದ್ದರಿಂದ ನಾಮಪತ್ರ ಸಲ್ಲಿಕೆ ನಿಗದಿತ ಸಮಯಕ್ಕಿಂತ 30 ನಿಮಿಷ ತಡವಾಗಿ ಆಯಿತು.ಬೃಹತ್ ಮೆರವಣಿಗೆಯಲ್ಲಿ ಶಾಸಕರುಗಳಾದ ಗೋಪಾಲಯ್ಯ, ಸುರೇಶ್‌ಗೌ‌ಡ, ಜ್ಯೋತಿಗಣೇಶ್, ಸುರೇಶ್‌ಬಾಬು, ತಿಪ್ಪೇಸ್ವಾಮಿ, ಎಂ.ಟಿ. ಕೃಷ್ಣಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ. ಆಂಜಿನಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಪೊಲೀಸರೊಂದಿಗೆ ಕಿರಿಕ್....ನಾಮಪತ್ರ ಸಲ್ಲಿಕೆ ವೇಳೆ ಡಿವೈಎಸ್ಪಿ ಚಂದ್ರಶೇಖರ್ ಹಾಗೂ ಎನ್.ಡಿ.ಎ ಅಭ್ಯರ್ಥಿ ಸೋಮಣ್ಣ ನಡುವೆ ಸಣ್ಣ ಕಿರಿಕ್ ಕೂಡ ನಡೆಯಿತು. ಡಿಸಿ ಕಚೇರಿ ಒಳಗೆ ಬಿಡುವ ವಿಚಾರದಲ್ಲಿ ಕಿರಿಕ್ ಆಗಿದೆ. ಈ ವೇಳೆ ಸೋಮಣ್ಣ ಅವರು ಏನ್ ತಮಾಷೆ ಮಾಡ್ತಾ ಇದ್ದೀರಾ ಅಂತಾ ಪ್ರಶ್ನೆ ಮಾಡಿದರು.ತಮಾಷೆ ಏನಿಲ್ಲ ಐದು ಜನರಿಗೆ ಅವಕಾಶ ಅಷ್ಟೇ ಎಂದು ಪೊಲೀಸರು ಹೇಳಿದಾಗ ಮೂರು ಸೆಟ್ ಇದೆ ಮುಖಂಡರನ್ನು ಬಿಡಿ ಎಂದ ಸೋಮಣ್ಣ. ಮರು ಪ್ರಶ್ನೆ ಮಾಡಿದಾಗ ಇಲ್ಲಾ ಸರ್ ಆಗೋದಿಲ್ಲ ಎಂದು ಪೊಲೀಸರು ಹೇಳಿರುವ ಘಟನೆ ನಡೆದಿದೆ.