ಸಾರಾಂಶ
----ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಅರಳುವ ಕಡೆ ಮಾನವೀಯತೆ ಅರಳುತ್ತದೆ ಎಂದು ಲೇಖಕ ಡಾ. ಮೊರಬದ ಮಲ್ಲಿಕಾರ್ಜುನ ತಿಳಿಸಿದರು.ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ, ಕನ್ನಡ ಸಂಘ ಹಾಗೂ ಕವಿತಾ ಪ್ರಕಾಶನ ಸಹಯೋಗದಲ್ಲಿ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿ.ವಿ. ಭುವನಾ ಅವರ ‘ಆಗಸದಿ ಹಾರುವ ಹಕ್ಕಿಗಳಿರಾ’ ಮತ್ತು ಡಾ.ಬಿ.ವಿ. ವಸಂತಕುಮಾರ್ ಅವರ ‘ಸತ್ತು ಬದುಕುವ ಸುಖ’ ಎಂಬ ಕವನ ಸಂಕಲನಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಮಾನವ ಮೂಲಭೂತವಾದ ಸುಖದಿಂದ ವಂಚಿತ ಆಗುತ್ತಿದ್ದಾನೆ. ಅದನ್ನು ನೀಗಿಸುವ ಕೆಲಸವನ್ನು ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮಾಡುತ್ತದೆ. ಅದು ಬದುಕಿನ ಸಹಜ, ಸರಳ ನೆಲೆಗೆ ಕರೆದುಕೊಂಡು ಬರುತ್ತದೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ತೆರೆದುಕೊಳ್ಳುವ ಶ್ರೀಮಂತ ಹೃದಯವು, ಪ್ರೀತಿಸುವ ಮನೋಭಾವದ ಬಡತನವನ್ನು ನೀಗಿಸಿ, ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಅವರು ಹೇಳಿದರು.ಪ್ರಸ್ತುತ ಕಾಲಘಟ್ಟದಲ್ಲಿ ಯಾರೊಬ್ಬರೂ ಬದುಕನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದಕ್ಕೆ ಮನುಷ್ಯರು ತಮ್ಮ ತಲೆಯಲ್ಲಿ ತುಂಬಿಕೊಂಡಿರುವ ನಾನತ್ವವೇ ಮುಖ್ಯ ಕಾರಣ. ಮನುಷ್ಯ ತನ್ನ ಅಹಂಕಾರದ ಕಾರಣದಿಂದಲೇ ಮೂಲಭೂತವಾಗಿ ಪಡೆದುಕೊಳ್ಳಬೇಕಾದ ಸುಖ- ಸಂತೋಷದಿಂದ ವಂಚಿತನಾಗುತ್ತಿದ್ದಾನೆ. ಮನುಷ್ಯ ನಾನು ಎಂಬ ಸಂಕುಚಿತತೆಯನ್ನು ಕಳೆದುಕೊಂಡು, ನಾವು ಎನ್ನುವ ಸಾಮಾಜಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಭುವನಾ ಅವರ ಆಗಸದಿ ಹಾರುವ ಹಕ್ಕಿಗಳಿರಾ- ಕವನ ಸಂಕಲನವು ವಿದ್ಯಾರ್ಥಿಗಳು ಮತ್ತು ಯುವ ಮನಸ್ಸುಗಳ ಭಾವನೆಗಳ ಪ್ರತೀಕವಾಗಿದೆ. ಡಾ. ವಸಂತಕುಮಾರ್ ಅವರ ಸತ್ತು ಬದುಕುವ ಸುಖ- ಕವನ ಸಂಕಲನವು ಅಧ್ಯಾಪಕರ, ಶೈಕ್ಷಣಿಕ ವರ್ಗದವರ ಭಾವನೆಗಳ ಪ್ರತಿನಿಧಿಯಾಗಿದೆ. ಬದುಕಿನ ಸಮಗ್ರತೆಯನ್ನು ಏಕಕಾಲದಲ್ಲಿ ಗಮನಿಸುತ್ತಾ ಆರೋಗ್ಯಕರ ಬದುಕನ್ನು ರೂಪಿಸಿಕೊಳ್ಳುವುದರ ಕಡೆಗೆ ಗಮನಹರಿಸಬೇಕು ಎಂಬುದನ್ನು ಈ ಕೃತಿಗಳು ಸಾರುತ್ತವೆ ಎಂದು ಅವರು ವಿವರಿಸಿದರು.ಎರಡೂ ಕೃತಿಗಳಲ್ಲಿನ ಕವಿತೆಗಳು ಕಾವ್ಯಾಭಿವ್ಯಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಅತ್ಯಂತ ಸೋಗಸಾಗಿ, ಸರಳ ಸುಂದರವಾಗಿ ಮೂಡಿ ಬಂದಿವೆ. ಕವಿತೆಗಳು ಅನುಭವದ ಪರಿಮಿತಿಯಲ್ಲಿವೆ. ಜಾನಪದ ಆಶಯಗಳಿಗೆ ಪೂರಕವಾಗಿದ್ದು, ಜಾನಪದ ಪರಂಪರೆಯ ಮುಂದುವರಿಕೆಯಾಗಿವೆ ಎಂದರು.
ಕವಿಗೋಷ್ಠಿನಂತರ ನಡೆದ ಕವಿಗೋಷ್ಠಿಯಲ್ಲಿ ಕೆ.ಎನ್. ಲಾವಣ್ಯಪ್ರಭಾ, ಸುಚಿತ್ರಾ ಹೆಗಡೆ, ಎನ್.ಆರ್. ರೂಪಶ್ರೀ, ಎನ್. ಲಾವಣ್ಯಾ, ನಂಜನಗೂಡು ಅನ್ನಪೂರ್ಣ, ಎಚ್.ಎಂ. ತನುಜಾ, ಸ್ಫೂರ್ತಿ, ಬಿ.ಎಸ್. ಮಂಜುಳಾ, ಎಂ. ರಕ್ಷಿತಾ, ಎಸ್. ಸಹನಾ, ಮಹಾಲಕ್ಷ್ಮಿ, ಲತಾಶ್ರೀ, ವಿನೋದಾ ಅವರು ತಮ್ಮ ಕವಿತೆಗಳನ್ನು ವಾಚಿಸಿದರು.
ಕೃತಿಯ ಲೇಖಕರಾದ ವಿ.ವಿ. ಭುವನಾ, ಡಾ.ಬಿ.ವಿ. ವಸಂತಕುಮಾರ್, ಮಹಾರಾಣಿ ಮಹಿಳಾ ಕಲಾ ಕಾಲೇಜು ಪ್ರಾಂಶುಪಾಲೆ ಡಾ.ಎಂ. ವಿಜಯಮ್ಮ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಎಂ. ದೇವಮ್ಮಣ್ಣಿ, ಸ್ನಾತಕೋತ್ತರ ಕನ್ನಡ ವಿಭಾಗದ ಸಂಯೋಜಕಿ ಡಾ.ಡಿ. ಸುಂದರಿ, ಕವಿತಾ ಪ್ರಕಾಶನದ ಗಣೇಶ ಅಮೀನಗಡ ಇದ್ದರು. ನಂಜುಂಡಯ್ಯ ನಿರೂಪಿಸಿದರು.----
ಕೋಟ್...ಮೊಬೈಲ್ ಜಗತ್ತು ಯುವಕರರನ್ನು ಚಿತ್ರ ವಿಚಿತ್ರವಾದ ಲೋಕಕ್ಕೆ ಕೊಂಡೊಯುತ್ತಿದೆ. ಯುವಕರು ಮೊಬೈಲ್ ಗೀಳಿನಿಂದ ಹೊರ ಬಂದು ತಮ್ಮೊಳಗೆ ಸುಪ್ತವಾಗಿ ಅಡಗಿರುವ ಚಿಂತನೆಗಳನ್ನು ಹೊರ ತೆಗೆಯುವ ಮೂಲಕ ಬದುಕನ್ನು ರೂಪಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು.
- ಡಾ. ಮೊರಬದ ಮಲ್ಲಿಕಾರ್ಜುನ, ಲೇಖಕ