ಸಾರಾಂಶ
ಬೆಂಗಳೂರು : ಸ್ವಚ್ಛತೆ ಕಾಪಾಡದ ಖಾಲಿ ನಿವೇಶನಗಳನ್ನು ಗುರುತಿಸಿ ಅದರ ಮಾಲೀಕರಿಗೆ ನೋಟಿಸ್ ನೀಡಿ, ದಂಡ ವಿಧಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಶೇಖರಣೆ ಆಗುತ್ತಿರುವ ಕುರಿತು ಹಲವು ದೂರುಗಳು ಬರುತ್ತಿವೆ. ಹೀಗಾಗಿ ವಲಯವಾರು ಖಾಲಿ ನಿವೇಶನಗಳ ಪಟ್ಟಿ ಮಾಡಬೇಕು. ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡದ ಮಾಲೀಕರಿಗೆ ನೋಟಿಸ್ ನೀಡಿ, ದಂಡ ವಿಧಿಸಬೇಕು ಎಂದು ಹೇಳಿದರು.
ಅನೇಕ ಖಾಲಿ ನಿವೇಶನಗಳು ಇಂದಿಗೂ ಆಸ್ತಿ ತೆರಿಗೆ ವ್ಯಾಪ್ತಿಗೆ ಬರದೇ ಇರುವುದರಿಂದ ಬಿಬಿಎಂಪಿ ಆದಾಯ ಖೋತಾ ಆಗುತ್ತಿದೆ. ಹೀಗಾಗಿ ಖಾಲಿ ನಿವೇಶನಗಳ ಪಟ್ಟಿ ಮಾಡುವ ಸಂದರ್ಭದಲ್ಲಿಯೇ ಅವುಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಬಂದಿದೆಯೇ ಎಂಬುದನ್ನು ಪರಿಶೀಲಿಸಿ, ತೆರಿಗೆ ವ್ಯಾಪ್ತಿಯಲ್ಲಿ ಇಲ್ಲದಿದ್ದರೆ ಕೂಡಲೇ ತೆರಿಗೆ ವಸೂಲಿಗೂ ಕ್ರಮ ಕೈಗೊಳ್ಳಬೇಕು ಎಂದರು.
ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ। ಕೆ.ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ್ ಕಲ್ಕೆರೆ, ಅವಿನಾಶ್ ಮೆನನ್ ರಾಜೇಂದ್ರನ್ ಇದ್ದರು.