ಎಲ್ಲಾ ಜಾನುವಾರುಗಳಿಗೆ ಕಡ್ಡಾಯ ಲಸಿಕೆ ಹಾಕಿಸಿ: ಡಿಸಿ ಮೀನಾ ನಾಗರಾಜ್

| Published : Mar 24 2024, 01:35 AM IST

ಸಾರಾಂಶ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಕಾಲುಬಾಯಿ ರೋಗ ಲಸಿಕಾ ಅಭಿಯಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ (ಎನ್.ಎ.ಡಿ.ಸಿ.ಪಿ) ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೂರ್ವ ಸಿದ್ಧತೆಗಳ ಪರಿಶೀಲನೆ ನಡೆಸಿ ಮಾತನಾಡಿದರು. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಏಪ್ರಿಲ್ 1 ರಿಂದ 30 ರವರೆಗೆ ನಡೆಯಲಿದ್ದು, ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಬೇಕು.

ಕಾಲುಬಾಯಿ ಲಸಿಕೆಯಿಂದ ಜಿಲ್ಲೆಯ ಯಾವುದೇ ಜಾನುವಾರು ಬಿಟ್ಟು ಹೋಗದಂತೆ ನೋಡಿಕೊಳ್ಳುವಂತೆ ತಿಳಿಸಿದ ಅವರು, ಲಸಿಕೆ ಬಗ್ಗೆ ಎಲ್ಲಾ ರೈತರಲ್ಲಿ ಜಾಗೃತಿ ಮೂಡಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಲಸಿಕಾ ತಂಡದ ಮುಖ್ಯಸ್ಥರು ಹಾಗೂ ಎಲ್ಲರು ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು. ಲಸಿಕೆ ಬಳಕೆ ಜಾನುವಾರುಗಳ ಉಪಚಾರ ಬಗ್ಗೆಯೂ ರೈತರಿಗೆ ತಿಳುವಳಿಕೆ ಮೂಡಿಸಿ ಎಂದು ಹೇಳಿದರು. ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಕುರಿತಂತೆ ಪ್ರಚಾರ ಕೈಗೊಳ್ಳಬೇಕು. ಕರ ಪತ್ರಗಳನ್ನು ಹಂಚಬೇಕು. ಬ್ಯಾನರ್ ಪ್ರದರ್ಶಿಸಬೇಕು. ಗ್ರಾಮ ಪಂಚಾಯಿತ್ ನಿಂದ ಡಂಗುರದ ಮೂಲಕ ರೈತರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು. ಆಯಾ ತಾಲೂಕಿನ ವಿಸ್ತರಣಾ ಅಧಿಕಾರಿಗಳು ಎಂ.ಪಿ.ಸಿ.ಎಸ್. ರೈತ ಸಂಪರ್ಕ ಕೇಂದ್ರ ಸಂಘಗಳ ಮೂಲಕ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಮೋಹನ್ ಕುಮಾರ್ ಮಾತನಾಡಿ, 5ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ 30 ದಿನಗಳ ವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ 3,24,369 ರಾಸುಗಳಿಗೆ ಲಸಿಕೆಯನ್ನು ಹಾಕುವ ಗುರಿ ಹೊಂದಲಾಗಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಲಸಿಕೆ ಮತ್ತು ಸಿರಿಂಜ್ ನೀಡಲ್ಸ್ ಗಳ ಶೇಖರಣೆ ಲಸಿಕೆದಾರರ ವ್ಯವಸ್ಥೆ, ಮಾನಿಟರಿಂಗ್ ವ್ಯವಸ್ಥೆ, ಮಾಡಿಕೊಳ್ಳಲಾಗಿದೆ. 36 ತಂಡಗಳನ್ನು ರಚಿಸಲಾಗಿದ್ದು 135 ಲಸಿಕೆದಾರರು ಕರ್ತವ್ಯ ನಿರ್ವಹಿಸಲಿದ್ದಾರೆ. 4 ತಿಂಗಳು ಮೇಲ್ಪಟ್ಟು ಎಲ್ಲಾ ಕರುಗಳು ಹಾಗೂ ರಾಸುಗಳಿಗೆ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯೆ ನಳಿನ ಡೀಸಾ, ನಗರಸಭೆ ಪೌರಾಯುಕ್ತರು ಕೃಷ್ಣಮೂರ್ತಿ ಹಾಗೂ ಪಶುಪಾಲನಾ ಸಹಾಯಕ ನಿರ್ದೇಶಕರು ಹಾಜರಿದ್ದರು.23 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯ ಕ್ರಮದಡಿ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೂರ್ವ ಸಿದ್ಧತೆಗಳ ಪರಿಶೀಲನಾ ಸಭೆ ಡಿಸಿ ಮೀನಾ ನಾಗರಾಜ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಇದ್ದರು.