ಸಾರಾಂಶ
ಜಿಲ್ಲಾಧಿಕಾರಿ ಕಚೇರಿಯಲ್ಲಿ 8ನೇ ಸುತ್ತಿನ ಕಾಲು ಬಾಯಿ ಜ್ವರದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಎಲ್ಲ ಜಾನುವಾರು ಮಾಲೀಕರು ತಮ್ಮ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ ಹಾಕಿಸಿ, ದೇಶವನ್ನು ಕಾಲು ಬಾಯಿ ಜ್ವರ ರೋಗದಿಂದ ಮುಕ್ತಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ. ಹೇಳಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ 8ನೇ ಸುತ್ತಿನ ಕಾಲು ಬಾಯಿ ಜ್ವರದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ನ.3ರಿಂದ ಆರಂಭವಾಗಲಿದೆ. ಕಾಲು ಬಾಯಿ ಜ್ವರವು ದನ, ಎಮ್ಮೆ, ಹಂದಿ, ಕುರಿ, ಮೇಕೆ ಹಾಗೂ ಕಾಡು ಪ್ರಾಣಿಗಳಾದ ಜಿಂಕೆ, ಕಾಡೆಮ್ಮೆ ಮುಂತಾದ ಪ್ರಾಣಿಗಳಿಗೆ ವೈರಾಣುವಿನಿಂದ ಬರುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಅತಿ ಬೇಗನೆ ಇನ್ನೊಂದು ರಾಸುವಿಗೆ ಹರಡುತ್ತದೆ. ಈ ರೋಗ ನಿಯಂತ್ರಿಸಲು ಲಸಿಕೆ ನೀಡುವುದೊಂದೇ ಪರಿಹಾರ. ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ ತಮ್ಮ ಜಾನುವಾರುಗಳನ್ನು ರೋಗದಿಂದ ರಕ್ಷಿಸಬೇಕು ಎಂದು ಅವರು ತಿಳಿಸಿದರು.ಪಶುಪಾಲನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ರಾಷ್ಟ್ರೀಯ ಜಾನುವಾರು ನಿಯಂತ್ರಣ ಕಾರ್ಯಕ್ರಮದಡಿ 7 ಸುತ್ತಿನಲ್ಲಿ ಲಸಿಕೆ ಹಾಕಲಾಗಿದ್ದು, ಯಾವುದೇ ರೋಗೋದ್ರೇಕಗಳು ಕಂಡುಬಂದಿಲ್ಲ. ಈಗಾಗಲೇ ಜಿಲ್ಲೆಗೆ ಅಗತ್ಯವಿರುವ ಲಸಿಕೆ ಹಾಗೂ ಇನ್ನಿತರ ಸಾಮಗ್ರಿಗಳನ್ನು ದಾಸ್ತಾನು ಇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಭಿಯಾನದ ಬಗ್ಗೆ ಪ್ರಚಾರ ಸಾಮಗ್ರಿಗಳನ್ನು ಅಪರ ಜಿಲ್ಲಾಧಿಕಾರಿ ಸಮಿತಿಯ ಇತರ ಸದಸ್ಯರೊಂದಿಗೆ ಬಿಡುಗಡೆಗೊಳಿಸಿದರು. ಕಚೇರಿಯ ತಾಂತ್ರಿಕ ಸಹಾಯಕ ನಿರ್ದೇಶಕ ಡಾ.ವಸಂತ್ ಕುಮಾರ್ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಇದ್ದರು.;Resize=(128,128))
;Resize=(128,128))