ಕುಷ್ಟಗಿ: ಪಟ್ಟಣದ ಪಶು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ 9ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಚಾಲನೆ ನೀಡಿ ಪೋಸ್ಟರ್ ಬಿಡುಗಡೆಗೊಳಿಸಿದರು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಸರ್ಕಾರ ಜಾನುವಾರುಗಳ ಪಾಲನೆ ಕುರಿತು ಅನೇಕ ಯೋಜನೆ ಜಾರಿಗೊಳಿಸಿದೆ. ಕಳೆದ ಹಲವು ವರ್ಷಗಳಿಂದ ಜಾನುವಾರುಗಳಿಗೆ ಕಾಲು ಬಾಯಿ ರೋಗ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದು, ಇದರ ನಿಯಂತ್ರಣಕ್ಕೆ ತಿಂಗಳ ಪರ್ಯಂತ ಲಸಿಕಾ ಆಂದೋಲನ ಹಮ್ಮಿಕೊಂಡಿದೆ. ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಂಡು ರೋಗ ನಿಯಂತ್ರಣಕ್ಕೆ ಸಹಕರಿಸಬೇಕೆಂದರು.ಕುಷ್ಟಗಿ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಲಸಿಕೆದಾರರು ಭೇಟಿ ನೀಡಿ ಲಸಿಕೆ ಹಾಕುವ ಕಾರ್ಯ ಯಶಸ್ವಿ ಮಾಡಬೇಕು ಎಂದು ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ಆನಂದ ದೇವರನಾವದಗಿ ಅವರಿಗೆ ಸೂಚಿಸಿದರು.
ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ಆನಂದ ದೇವರನಾವದಗಿ ಮಾತನಾಡಿ, ಕಾಲು ಬಾಯಿ ರೋಗ ಮಾರಣಾಂತಿಕವಾಗಿದ್ದು, ವೈರಸ್‌ನಿಂದ ಬರುತ್ತಿದೆ. ಹೈನು ರಾಸುಗಳಲ್ಲಿ ಕಾಣಿಸಿಕೊಂಡರೆ ಹಾಲು ಕೊಡುವ ಸಾಮರ್ಥ್ಯ ಮತ್ತು ಗರ್ಭಧಾರಣೆ ಶಕ್ತಿ ಕಳೆದುಕೊಳ್ಳುತ್ತವೆ. ಬೇಸಿಗೆ ದಿನಗಳಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತವೆ. ಇದರಿಂದ ಉಳುಮೆ ಬಲ ಕುಂದುತ್ತದೆ. ಆದ್ದರಿಂದ ಇಲಾಖೆ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ಕಾರ್ಯಕ್ರಮ ರಾಜ್ಯಾದ್ಯಂತ 30 ದಿನ ಹಮ್ಮಿಕೊಂಡಿದ್ದು, ತಾಲೂಕಿನಲ್ಲಿ 63 ಸಾವಿರ ಜಾನುವಾರು ಇದ್ದು, ಒಟ್ಟು 44 ಜನ ಲಸಿಕೆದಾರರು ಇದ್ದಾರೆ. ಪಲ್ಸ್ ಪೋಲಿಯೊ ಮಾದರಿಯಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕಲಾಗುತ್ತದೆ. ರೈತರು ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ಅಶೋಕ ಶಿಗ್ಗಾಂವಿ, ತಾಪಂ ಇಒ ಪಂಪಾಪತಿ ಹಿರೇಮಠ, ಡಾ. ಸಿದ್ದಲಿಂಗಯ್ಯ ಶಂಕಿನ್, ಡಾ.ಸದ್ದಾಂ ಹುಸೇನ್, ಡಾ. ನಾಗಪ್ಪ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಗೂ ರೈತರು ಇದ್ದರು.