ಅನಿವಾರ್ಯ ಕಾರಣಗಳಿಂದ ಮಕ್ಕಳು ಪೋಲಿಯೋ ಬೂತ್‌ಗಳಿಗೆ ಬರದೇ ಇದ್ದ ಪಕ್ಷದಲ್ಲಿ ಪೋಲಿಯೋ ಬೂತ್ ದಿನದ ನಂತರ ಗ್ರಾಮೀಣ ಪ್ರದೇಶಗಳಲ್ಲಿ 2 ದಿನ ಹಾಗೂ ನಗರ ಪ್ರದೇಶಗಳಲ್ಲಿ 3 ದಿನ ಅಂದರೆ ಡಿಸೆಂಬರ್ 21 ರಿಂದ 24 ವರೆಗೆ ಅಂಗನವಾಡಿ ,ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಆಯ್ದ ದಿನಗಳಂದು ಮನೆ ಭೇಟಿ ಮಾಡಿ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಕ್ಕಳಿಗೆ ಹಾಕುವ ಎರಡು ಹನಿ ಪೋಲಿಯೋ ಲಸಿಕೆಯಿಂದ ಪೋಲಿಯೋ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬೆಳಗ್ಗೆ ಪೋಲಿಯೋ ಲಸಿಕೆ ಅಂಗವಾಗಿ ಭಾನುವಾರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದರು.

ಪೋಲಿಯೋದಿಂದ ಅಂಗವೈಕಲ್ಯ

ಪೋಲಿಯೋ ಎಂಬುದು ಅಂಗವಿಕಲತೆ ಉಂಟುಮಾಡುವ ಸಾಂಕ್ರಾಮಿಕ ರೋಗವಾಗಿದ್ದು, ಇದು ಪೋಲಿಯೋ ವೈರಸ್‌ನಿಂದ ಹರಡುವುದು. ಪೋಲಿಯೋ ಕಾಯಿಲೆಯನ್ನು ಪೋಲಿಯೋ ಲಸಿಕೆಯನ್ನು ಹನಿಗಳ ರೂಪದಲ್ಲಿ 0-5 ವರ್ಷದೊಳಗಿನ ಮಕ್ಕಳಿಗೆ ಹಾಕುವುದರಿಂದ ತಡೆಗಟ್ಟಬಹುದಾಗಿದೆ ಎಂದರು.

ಜಿಲ್ಲೆಯಾದ್ಯಂತ ಡಿ.21ರಿಂದ ಭಾನುವಾರದಿಂದ ಡಿಸೆಂಬರ್ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾಕರಣ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯಲ್ಲಿ 0-5 ವರ್ಷದೊಳಗಿನ 1,22,816 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲೆಯಾದ್ಯಂತ ಪೋಲಿಯೋ ಹನಿಗಳನ್ನು ಪೋಲಿಯೋ ಬೂತ್‌ಗಳಲ್ಲಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಬೆಳಿಗ್ಗೆ 8-00 ರಿಂದ ಸಂಜೆ 5-00 ಗಂಟೆಯವರೆಗೆ ನೀಡಲಾಗುವುದು ಎಂದರು.

ಮನೆ ಮನೆಗೆ ಭೇಟಿ:

ಅನಿವಾರ್ಯ ಕಾರಣಗಳಿಂದ ಮಕ್ಕಳು ಪೋಲಿಯೋ ಬೂತ್‌ಗಳಿಗೆ ಬರದೇ ಇದ್ದ ಪಕ್ಷದಲ್ಲಿ ಪೋಲಿಯೋ ಬೂತ್ ದಿನದ ನಂತರ ಗ್ರಾಮೀಣ ಪ್ರದೇಶಗಳಲ್ಲಿ 2 ದಿನ ಹಾಗೂ ನಗರ ಪ್ರದೇಶಗಳಲ್ಲಿ 3 ದಿನ ಅಂದರೆ ಡಿಸೆಂಬರ್ 21 ರಿಂದ 24 ವರೆಗೆ ಅಂಗನವಾಡಿ ,ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಆಯ್ದ ದಿನಗಳಂದು ಮನೆ ಭೇಟಿ ಮಾಡಿ ಎಲ್ಲಾ ಮಕ್ಕಳಿಗೆ, ಪೋಲಿಯೋ ಲಸಿಕೆ ಹಾಕಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಲಾಗುವುದು ಎಂದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಮಾತನಾಡಿ, ಪೋಲಿಯೋ ಲಸಿಕೆಯನ್ನು ಹನಿಗಳ ರೂಪದಲ್ಲಿ ಉಚಿತವಾಗಿ 5 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಜಿಲ್ಲೆಯಾದ್ಯಂತ 646 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು ಒಟ್ಟು 2,664 ವ್ಯಾಕ್ಸಿನೇಟರ್ಸಗಳು ಲಸಿಕೆಯನ್ನು ಹಾಕಲಿದ್ದು 1,11,212 (0-5 ವರ್ಷ) ಮಕ್ಕಳಿಗೆ ಲಸಿಕೆ ಹಾಕಲು ಗುರಿ ನಿಗಧಿ ಪಡಿಸಿಕೊಳ್ಳಲಾಗಿದೆ ಎಂದರು.

ರೋಗ ನಿರೋಧಕ ಲಸಿಕೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ್ ಕುಮಾರ್ ಮಾತನಾಡಿ, ಜಿಲ್ಲೆಯಾದ್ಯಾಂತ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಲಭ್ಯವಿರುವ ಎಲ್ಲ ಲಸಿಕೆಗಳೊಂದಿಗೆ ಸಂಪೂರ್ಣ ರೋಗ ನಿರೋಧಕ ಲಸಿಕೆ ನೀಡುವ ಸಲುವಾಗಿ ಮಾರ್ಚ್ 3 ರಿಂದ ಮಾರ್ಚ್ 6 ರವರೆಗೆ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಭಾನುವಾರ ಡಿಸೆಂಬರ್ 21 ನೇ ತಾರೀಖಿನಂದು ಜನಿಸಿದ ನವಜಾತ ಶಿಶುವಿಗೂ ಸಹ ಲಸಿಕೆ ಹಾಕಿಸುವಂತೆ ಪೋಷಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಂಜುಳಾ ದೇವಿ, ಜಿಲ್ಲಾ ಆರೋಗ್ಯ ಮತ್ತು ಸಂತಾನೋತ್ಪತ್ತಿ ಅಧಿಕಾರಿ ಡಾ. ಸಂತೋಷ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ ಮಂಜುಳಾ, ತಹಸೀಲ್ದಾರ್ ರಷ್ಮೀ, ವೈದ್ಯರಾದ ಡಾ. ಪ್ರಕಾಶ್,ಡಾ.ಅರ್ಜುನ್ ಬಹದ್ದೂರ್, ಡಾ.ಹರಣಿ,ಡಾ.ರಚನ್,ಡಾ.ರವಿಕುಮಾರ್, ಡಾ.ಪ್ರೇಮ್ ಸಾಗರ್, ಜಿಲ್ಲಾ ನರ್ಸಿಂಗ್ ಆಫೀಸರ್ ವಿಜಯಲಕ್ಷ್ಮಿ ಮತ್ತಿತರರು ಇದ್ದರು.