ಸಾರಾಂಶ
ಮಗು ಆರೋಗ್ಯವಾಗಿರಲು ಹಾಗೂ ಅಂಗ ನ್ಯೂನತೆಯಿಂದ ತಡೆಯಲು ಈ ಪಲ್ಸ್ ಲಸಿಕೆ ಉಪಯುಕ್ತವಾಗಿದೆ
ಹಳಿಯಾಳ: ನವಜಾತ ಶಿಶುವಿನಿಂದ ಐದು ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ಹೊರಗುಳಿಯದಂತೆ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ನಿಯೋಜಿತರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹಳಿಯಾಳ ತಾಪಂ ಇಒ ಪರಶುರಾಮ ಘಸ್ತೆ ಹೇಳಿದರು.
ಭಾನುವಾರ ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಲ್ಸ್ ಪೋಲಿಯೋ ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಗು ಆರೋಗ್ಯವಾಗಿರಲು ಹಾಗೂ ಅಂಗ ನ್ಯೂನತೆಯಿಂದ ತಡೆಯಲು ಈ ಪಲ್ಸ್ ಲಸಿಕೆ ಉಪಯುಕ್ತವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ರಮೇಶ ಕದಂ ಮಾತನಾಡಿ, ಹಳಿಯಾಳ ತಾಲೂಕಿನಾದ್ಯಂತ 96 ಲಸಿಕಾ ಕೇಂದ್ರಗಳಲ್ಲಿ ಈ ಪಲ್ಸ್ ಪೋಲಿಯೋ ಲಸಿಕೆ ವಿತರಿಸಲು ಸರ್ವ ಸಿದ್ಧತೆ ಮಾಡಲಾಗಿದ್ದು, 14505 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ ಎಂದರು.
ಸಿಡಿಪಿಒ ಡಾ. ಲಕ್ಷ್ಮಿದೇವಿ, ಮಕ್ಕಳ ತಜ್ಞ ಡಾ. ಶ್ರೀಶೈಲ್ ಮಾದಣ್ಣನವರ, ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ನಾಯ್ಕ್, ಜಿಲ್ಲಾ ಕೇಂದ್ರದಿಂದ ಆಗಮಿಸಿದ ನೋಡಲ್ ಅಧಿಕಾರಿ ಗಿರೀಶ್, ಬಸವರಾಜ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮರಿ, ಸುಧಾ ಕಾಪಾಡಿಸ್ಕರ್, ಚನ್ನಬಸವರಾಜ್ ಹಾಗೂ ಇತರರು ಇದ್ದರು.