ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಸೂಚನೆ

| Published : Apr 22 2025, 01:54 AM IST

ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಾನುವಾರು ಕಾಲುಬಾಯಿ ಜ್ವರ ರೋಗ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ಹಾಗೂ ಪಶು ಸಂಜೀವಿನಿ ವಾಹನಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಏಳನೇ ಸುತ್ತಿನ ಕಾಲುಬಾಯಿ ಜ್ವರ ರೋಗ ಲಸಿಕಾ ಕಾರ್ಯಕ್ರಮವನ್ನು ಏ. 26 ರಿಂದ ಜೂ. 4 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಪ್ರತಿಶತಃ 100 ರಷ್ಟು ಗುರಿ ಸಾಧನೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಭಾನುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಾನುವಾರು ಕಾಲುಬಾಯಿ ಜ್ವರ ರೋಗ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ಹಾಗೂ ಪಶು ಸಂಜೀವಿನಿ ವಾಹನಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ರೋಗವು ವೈರಾಣುವಿನಿಂದ ಬರುವ ಅಂಟು ರೋಗವಾಗಿದ್ದು, ಗೊರಸು ಕಾಲುಗಳನ್ನು ಹೊಂದಿರುವ ಎಲ್ಲಾ ಪ್ರಾಣಿಗಳಲ್ಲಿ ಈ ರೋಗವು ಕಂಡುಬರುತ್ತದೆ. ರೈತರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವ ಈ ರೋಗವನ್ನು ನಿಯಂತ್ರಿಸಲು ಲಸಿಕೆ ನೀಡುವುದೊಂದೇ ಪರಿಹಾರವಾಗಿದ್ದು, ಪ್ರತೀ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸುವುದರೊಂದಿಗೆ ರೈತರು ತಮ್ಮ ಜಾನುವಾರುಗಳನ್ನು ಈ ರೋಗದಿಂದ ರಕ್ಷಿಸಿಕೊಳ್ಳಬೇಕು ಎಂದರು.

ಕಾಲುಬಾಯಿ ಲಸಿಕಾ ಕಾರ್ಯಕ್ರಮದಲ್ಲಿ ಜಾನುವಾರುಗಳಿಕೆ ಲಸಿಕೆ ಹಾಕಿಸುವುದರೊಂದಿಗೆ, ಯಾವುದೇ ಜಾನುವಾರುಗಳು ಲಸಿಕೆಯಿಂದ ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು ಎಂದ ಅವರು, ಈಗಾಗಲೇ ಜಿಲ್ಲೆಗೆ ಅಗತ್ಯವಿರುವ ಲಸಿಕೆ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ದಾಸ್ತಾನು ಇಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಆರನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ 2,08,558 ಜಾನುವಾರುಗಳ ಗುರಿ ನಿಗದಿಪಡಿಸಿ, 2,00,888 ಜಾನುವಾರುಗಳಿಗೆ ಲಸಿಕೆ ಹಾಕಿಸಿ, ಶೇ. 96 ರಷ್ಟು ಪ್ರಗತಿ ಸಾಧಿಸಿದ್ದು, ಏಳನೇ ಸುತ್ತಿನಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಅವುಗಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದರು.

ಜಿಲ್ಲೆಯ ಕಾಪು, ಉಡುಪಿ, ಬೈಂದೂರು, ಹೆಬ್ರಿ, ಕುಂದಾಪುರ, ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕು ಮತ್ತು ಉಡುಪಿ ಪಾಲಿಕ್ಲಿನಿಕ್ ನಲ್ಲಿ ತಲಾ ಒಂದರಂತೆ ಒಟ್ಟು 8 ಪಶು ಸಂಜೀವಿನಿ ಆಂಬುಲೆನ್ಸ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತೀ ಚಿಕಿತ್ಸಾ ಘಟಕದ ವಾಹನದಲ್ಲಿ ಪಶುವೈದ್ಯರು, ಪಶುವೈದ್ಯ ಸಹಾಯಕ ಹಾಗೂ ವಾಹನ ಚಾಲಕರು ನೇಮಕಗೊಂಡಿದ್ದು, 2024-25 ನೇ ಸಾಲಿನಲ್ಲಿ ಈ ವಾಹನಗಳ ಮೂಲಕ ಒಟ್ಟು 7,488 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿರುತ್ತದೆ ಎಂದರು.

ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಂದೀಪ್, ತಾಲೂಕುಗಳ ಆಡಳಿತ ಮುಖ್ಯ ಪಶುವೈದ್ಯಾಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.