ಸಾರಾಂಶ
ತುಮಕೂರು: ದೀಪದಂತಿದ್ದ ಅಪ್ಪ ಬದುಕಿನಲ್ಲಿ ಸಾರ್ಥಕತೆ ಕಂಡರು. ಆ ದೀಪದ ಬೆಳಕಿನಲ್ಲಿ ವ್ಯಕ್ತಿತ್ವಪೂರ್ಣವಾಗಿ ಬೆಳೆದು ಅವರ ಹೆಸರು ಉಳಿಸುತ್ತೇನೆ ಎಂದು ಸಾಹಿತಿ ಡಾ.ಬಿ.ಸಿ.ಶೈಲಾ ನಾಗರಾಜ್ ತಿಳಿಸಿದರು.ನಗರದ ಡಾ.ಶೈಲಾ ನಾಗರಾಜ್ ಸಾಹಿತ್ಯ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯಗೆ ಬಿ.ಚನ್ನಪ್ಪ ಗೌರಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ವಚನ ಸಾಹಿತ್ಯ ಜಗತ್ತಿಗೆ ದೊಡ್ಡ ಕೊಡುಗೆ ನೀಡಿದೆ ಎಂದರು.ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ಈಗಿನವರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಜಾಲತಾಣದಲ್ಲಿ ಇನ್ನೊಂದು ಪ್ರಕಾರದ ಸಾಹಿತ್ಯ ಬೆಳೆಯುವುದೇನೋ ನೋಡಬೇಕು. ಮಾನವೀಯ ಮೌಲ್ಯಗಳನ್ನು, ಸಾಮರಸ್ಯದ ಬದುಕನ್ನು ಸಾರಿ ಹೇಳುವ ವಚನ ಸಾಹಿತ್ಯದ ಆಶಯಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ರಾಜಕಾರಣಿಗಳನ್ನು ಗುಮಾನಿಯಿಂದ ನೋಡಲಾಗುತ್ತದೆ. ಈಗ ಪತ್ರಿಕೆಯವರನ್ನೂ ಗುಮಾನಿಯಿಂದ ನೋಡುವಂತಹ ಪರಿಸ್ಥಿತಿ ಬಂದಿದೆ. ಬೇರೆಯವರನ್ನು ಮೆಚ್ಚಿಸಿ ನಾವು ಬೆಳೆಯುವ ಪರಿಸ್ಥಿತಿ ಬಂದಿದೆ. ಜಾತಿ ವಿಜೃಂಭಿಸುವ, ಮನಸುಗಳು ಕದಡುವಂತಹ ಕಾಲದಲ್ಲಿ ಡಾ.ಶೈಲಾ ನಾಗರಾಜ್ ಅವರು, ಜಾತಿಧರ್ಮ ಮೀರಿ ಎಲ್ಲಾ ವರ್ಗದ ಹೆಣ್ಣುಮಕ್ಕಳೊಂದಿಗೆ ಸೇರಿಕೊಂಡು ಸಾಮಾಜಿಕ, ಸಾಹಿತ್ಯಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಇವರ ತಂದೆಯಿಂದ ಬಂದ ಗುಣ ಎಂದರು.ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಾ.ಶೈಲಾ ನಾಗರಾಜ್ ತಮ್ಮ ತಂದೆ ಬಿ.ಚನ್ನಪ್ಪಗೆ ನುಡಿನಮನ ಸಲ್ಲಿಸಿದರು. ಅಪ್ಪನ ಪ್ರತಿನಿಧಿಯಾಗಿ ನಾನಿದ್ದೇನೆ, ಅವರ ಪ್ರಾತಿನಿಧ್ಯವಹಿಸಿಕೊಂಡು ಅವರು ಮಾಡುತ್ತಿದ್ದ ಕೆಲಸಗಳನ್ನು ಮುಂದುವರೆಸುತ್ತೇನೆ ಎಂದರು. ತಮ್ಮ ತಂದೆ ಅನನ್ಯ ರಾಜಕೀಯ ಚಿಂತಕರು, ಒಳ್ಳೆಯ ಓದುಗರು, ಪ್ರಗತಿಪರ ಧೋರಣೆ ಇಟ್ಟುಕೊಂಡಿದ್ದರು. ಮಂತ್ರ ಹೇಳದೆ ನಿತ್ಯ ವಚನಗಳನ್ನು ಹೇಳಿ ಪೂಜೆ ಮಾಡುತ್ತಿದ್ದರು ಎಂದರು.ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಟಿ.ಮುರಳಿಕೃಷ್ಣಪ್ಪ, ಶೈನಾ ಅಧ್ಯಯನ ಕೇಂದ್ರ ಅಧ್ಯಕ್ಷ ದೊಂಬರನಹಳ್ಳಿ ನಾಗರಾಜ್, ಕದಳಿ ವೇದಿಕೆ ಅಧ್ಯಕ್ಷೆ ಎಂ.ಎಸ್.ಸ್ವರ್ಣಗೌರಿ, ಸಮಾಜ ಸೇವಕಿ ಸರ್ವಮಂಗಳ ಶಿವರುದ್ರಪ್ಪ, ಬಿ.ಸಿ.ಸೋಮಪ್ರಸಾದ್, ಬಿ.ಸಿಪ್ರಭುಪ್ರಸಾದ್ ಭಾಗವಹಿಸಿದ್ದರು.