ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ವಚನ ಸಾಹಿತ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ. ವಚನ ಸಾಹಿತ್ಯದ ಕುರಿತು ಅನೇಕ ಕೃತಿಗಳು ಬಂದಿದ್ದು, ಅದನ್ನು ಅರಿಯುವ ಕೆಲಸ ನಾವೆಲ್ಲರೂ ಮಾಡಬೇಕು ಎಂದು ಮೈಸೂರಿನ ಸುತ್ತೂರು ಮಠದ ಮಠಾಧೀಶ ಡಾ. ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ನೇತೃತ್ವದಲ್ಲಿ ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ನಡೆದ ‘ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸುಲಭವಾದ, ಸರಳ ಭಾಷೆಯಲ್ಲಿ ಲೌಕಿಕ ಸಂಗತಿಯಲ್ಲದೆ, ಭಗವಂತ-ಮನುಷ್ಯನ ಕುರಿತ ಸಂಗತಿ ವಚನ ಸಾಹಿತ್ಯದಲ್ಲಿದೆ. 12ನೇ ಶತಮಾನ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಘಟ್ಟ. ಆ ಕಾಲವನ್ನು ಬಸವಯುಗ, ವಚನಯುಗ ಎಂದು ಕರೆಯಲಾಗುತ್ತಿತ್ತು. ವಚನ ಅಂದರೆ ಮಾತು ಎಂಬ ಅರ್ಥವೂ ರೂಢಿಯಲ್ಲಿದೆ. ವಚನ ಸಾಹಿತ್ಯ ಸುಲಭವಾಗಿದ್ದು, ಇದನ್ನು ತಿಳಿದುಕೊಳ್ಳಲು ಯಾವುದೇ ವ್ಯಾಖ್ಯಾನ ಬೇಕಿಲ್ಲ. ಬದಲಾಗಿ ನಂಬಿಕೆ, ವಿಶ್ವಾಸ, ಆಚರಣೆ ಮುಖ್ಯ. ಬಸವಣ್ಣನವರ ವಚನ ಎಲ್ಲ ಧರ್ಮಗಳಿಗೂ ಸೂತ್ರರೂಪದಲ್ಲಿ, ಸುಲಭ ಸರಳ ಮಾತಿನಲ್ಲಿದೆ ಎಂದರು. ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಮಠಾಧ್ಯಕ್ಷ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಜನಪರ ವಚನ: ಸಮ್ಮೇಳನಾಧ್ಯಕ್ಷ ಡಾ. ಅರವಿಂದ್ ಜತ್ತಿ ಮಾತನಾಡಿ, ವಚನ ಸಾಹಿತ್ಯ ಮತ್ತು ಜೀವನ ಅನುಸಂಧಾನ ಈ ಸಮ್ಮೇಳನದ ಆಶಯ. ಸಮ್ಮಿಲನ ಸಮ್ಮೇಳನವಾಗಿ ರೂಪುಗೊಂಡು ಜಾತ್ರೆಯ ರೂಪ ಪಡೆಯುತ್ತಿದೆ. ಬಸವಣ್ಣ, ಬಸವಾದಿ ಶರಣರನ್ನು, ವಚನವನ್ನು ಕೇವಲ ಧಾರ್ಮಿಕ ಸಾಹಿತ್ಯವಾಗಿ ನೋಡುವ ಪರಿಪಾಠ ಬಂದಿದೆ. ಕ್ರಾಂತಿ ಸ್ವರೂಪವಾದ ಆಂದೋಲನವನ್ನು ನಾವು ಒಂದು ಧರ್ಮಕ್ಕೆ ಸೀಮಿತಗೊಳಿಸಿ, ಇಡೀ ಮಹಾಕಲ್ಪನೆಯನ್ನು ಸಂಕುಚಿತಗೊಳಿಸಿದ್ದೇವೆ ಎಂಬ ಚಿಂತನೆ ಮೂಡುತ್ತಿದೆ. ಬದುಕಿನ ಸಾಹಿತ್ಯವಾಗಿ ವಚನ ಕಾಣಿಸಿಕೊಳ್ಳುತ್ತದೆ. ವಚನದಲ್ಲಿ ಧರ್ಮವನ್ನು ಹುಡುಕಬಾರದು. ಬದುಕಿನ ಧರ್ಮವನ್ನು ಬಸವಣ್ಣ ಅವರು ಜನಪರ ಭಾಷೆಯಲ್ಲೇ ನೀಡಿದ್ದಾರೆ. ವಚನಗಳಲ್ಲಿ ಅನುಭವ ಇರುತ್ತದೆ, ಅನುಭಾವವೂ ಇರುತ್ತದೆ. ಆದರೆ, ನಾವು ಅನುಭವವನ್ನೇ ಬದುಕಾಗಿ ಮಾಡಿಕೊಂಡಿದ್ದೇವೆ ಎಂದು ವಿವರಿಸಿದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಚನ ಸಾಹಿತ್ಯ ದಿಬ್ಬಣಕ್ಕೆ ಚಾಲನೆ ನೀಡಲಾಯಿತು. ಬಳಿಕ ಪುರಭವನದಲ್ಲಿ ಧ್ವಜಾರೋಹಣ ನೆರವೇರಿತು.
ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸುತ್ತೂರು ಶ್ರೀಗಳು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಶಯ ಭಾಷಣ ಮಾಡಿದರು.
ಅ.ಭಾ.ವಿ.ಮ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ಸಾಕ್ಷ್ಯಚಿತ್ರ ಉದ್ಘಾಟಿಸಿದರು. ಅಕ್ಕಮಹಾದೇವಿ ವೀರಶೈವ ಮಹಾಸಂಘ ಮಂಗಳೂರು ಇದರ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ ಅವಲೋಕನ ಮಾತನ್ನಾಡಿದರು. ಸಾಧಕರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಸಂಗೀತ ನಿರ್ದೇಶಕ ಗುರುಕಿರಣ್, ಬ್ಯಾಂಕ್ ಆಫ್ ಬರೋಡ ಪ್ರಧಾನ ವ್ಯವಸ್ಥಾಪಕ, ವಲಯ ಮುಖ್ಯಸ್ಥ ರಾಜೇಶ್ ಖನ್ನಾ, ಎಂಆರ್‌ಪಿಎಲ್‌ನ ಸುದರ್ಶನ್, ಪ್ರಮುಖರಾದ ಎ.ಸಿ. ಭಂಡಾರಿ, ಡಾ. ಕೆ.ಸಿ. ಮಾದೇಶ್, ಪ್ರಸನ್ನ ಇದ್ದರು.ಶ್ರೀ ಮಹಾಗಣತಿ ದೇವಸ್ಥಾನದ ಉರ್ವಸ್ಟೋರ್ ಇದರ ಅಧ್ಯಕ್ಷ ಸುರೇಂದ್ರ ರಾವ್ ಸ್ವಾಗತಿಸಿದರು. ಡಾ. ಶಿವಪ್ರಕಾಶ್ ನಿರೂಪಿಸಿದರು.ವಿವಿಧ ವಚನ ಗೋಷ್ಠಿಗಳು..
ಸಭಾ ಕಾರ್ಯಕ್ರಮ ಬಳಿಕ ಮಂಗಳೂರಿನ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅಧುನಿಕ ವಚನಗೋಷ್ಠಿ ನಡೆಯಿತು. ‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಅನುಸಂಧಾನ’ ವಿಷಯದ ಬಗ್ಗೆ ಚಿಂತನ ಗೋಷ್ಠಿಯಲ್ಲಿ ಡಾ. ವರದರಾಜ ಚಂದ್ರಗಿರಿ ವಿಷಯ ಮಂಡಿಸಿದರು. ‘ತುಳುನಾಡಿನಲ್ಲಿ ವೀರಶೈವ ಪರಂಪರೆ ಒಂದು ಐತಿಹಾಸಿಕ ನೋಟ’ ವಿಷಯದ ಬಗ್ಗೆ ಡಾ. ಪುಂಡಿಕಾೖ ಗಣಪತಿ ಭಟ್ ಮಾತನಾಡಿದರು. ‘ವಚನ ಸಾಹಿತ್ಯ ಅವಲೋಕನ’ ಗೋಷ್ಠಿ ಉಪನ್ಯಾಸಕ ರಘು ಇಡ್ಕಿದು ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ ವಚನ ಗಾನ ವೈಭವ ನಡೆಯಿತು.