ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮನುಕುಲದ ಅಸ್ವಸ್ಥತೆಯನ್ನು ಹೋಗಲಾಡಿಸುವ ಶಕ್ತಿ ವಚನ ಸಾಹಿತ್ಯಕ್ಕೆ ಇದೆ ಎಂದು ದೇವರ ದಾಸಿಮಯ್ಯ ತಿಳಿಸಿಕೊಟ್ಟಿದ್ದಾರೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಡಿ.ಶಿವಪ್ಪ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೇಕಾರ ಸಮುದಾಯಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆದ್ಯ ವಚನಕಾರರಾದ ದೇವರ ದಾಸಿಮಯ್ಯರನ್ನು ಪರಿಸರ ಚಿಂತಕ, ತತ್ವಜ್ಞಾನಿ, ಜೀವ ವಿಜ್ಞಾನಿ, ವಚನ ಬ್ರಹ್ಮ ಎಂದು ಬಿಂಬಿಸಲಾಗಿದೆ. 13ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಹಾಗೂ 15 ನೇ ಶತಮಾನದಲ್ಲಿ ಶಿವತತ್ವ ಚಿಂತಾಮಣಿ ಎಂಬ ಪ್ರಮುಖ ಗ್ರಂಥಗಳಲ್ಲಿ ದಾಸಿಮಯ್ಯನವರ ಬಗ್ಗೆ ಕೂಲಂಕುಷವಾಗಿ ವಿವರಿಸಲಾಗಿದೆ ಎಂದರು.

ರಾಘವಾಂಕ ರಚಿಸಿರುವ ದೇವಾಂಗ ದಾಸಿಮಯ್ಯ ಪುರಾಣದಲ್ಲಿ ದೇವರ ದಾಸಿಮಯ್ಯ ಅವತಾರ ಪುರುಷ, ಪವಾಡ ಪುರುಷ ಎಂದು ಹೇಳಲಾಗಿದೆ. ಡಾಂಬಿಕತೆ ಹೆಸರಿನಲ್ಲಿ ನಾವು ನಮ್ಮ ಸಹಜ ಮನಸ್ಥಿತಿಯನ್ನು ಕಳೆದುಕೊಳ್ಳುತ್ತಿದ್ದೇವೆ, ಅದನ್ನು ಹೋಗಲಾಡಿಸಬೇಕು ಎಂದು ಬಹಳ ಹಿಂದೆಯೇ ನಮಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪಟ್ಟಸಾಲಿ ಸಂಘದ ಅಧ್ಯಕ್ಷರಾದ ಕಾಂತೇಶ ಕದರಮಂಡಲಗಿ ಮಾತನಾಡಿ, ನೇಕಾರ ಸಮಾಜವು ಸುಮಾರು 29 ಉಪ ಪಂಗಡಗಳನ್ನು ಒಳಗೊಂಡಿದ್ದು ಬಾಗಲಕೋಟೆ, ಹುಬ್ಬಳ್ಳಿ, ರಾಣೆಬೆನ್ನೂರು ಹೀಗೆ ಹಲವು ಪ್ರದೇಶದಲ್ಲಿ ಹಂಚಿ ಹೋಗಿದೆ. ಒಬ್ಬ ವೈಜ್ಞಾನಿಕ ಮನಸ್ಸಿನ ದಾಸಿಮಯ್ಯ ನಮ್ಮ ಕುಲಗುರುವಾಗಿರುವುದು ಅದೃಷ್ಟದ ಸಂಗತಿಯಾಗಿದ್ದು, ನಮ್ಮ ಒಳ್ಳೆಯ ಕಾಯಕದಿಂದ ದೇವರನ್ನು ಗುರುತಿಸಲು ಸಾಧ್ಯ ಎಂದು 11 ನೇ ಶತಮಾನದಲ್ಲೇ ಅವರು ತಿಳಿಸಿದ್ದಾರೆ ಎಂದು ತಿಳಿಸಿದರು.


ಜೀವನದಲ್ಲಿ ಉತ್ತಮ ನಡವಳಿಕೆಯುಳ್ಳ ವ್ಯಕ್ತಿಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ. ಪ್ರತಿಯೊಬ್ಬರು ವಿದ್ಯೆಯನ್ನು ಕಲಿತು ಅನುಭಾವಿಗಳಾಗಿ ಸಮಾಜದಲ್ಲಿ ಬಾಳಬೇಕು ಎಂದು ಸಾರಿದ ಅವರು ತಮ್ಮ ಪ್ರತಿ ವಚನದಲ್ಲಿ ವೈಜ್ಞಾನಿಕ ನಿಲುವು ಕಂಡುಕೊಂಡಿದ್ದಾರೆ. ಜಾತಿ ಪದ್ದತಿ ನಿರ್ಮೂಲನೆಗೆ ಹೋರಾಡಿದ ಮಹಾನ್ ದಾರ್ಶನಿಕರ ಸಾಲಿನಲ್ಲಿ ದಾಸಿಮಯ್ಯ ನಿಲ್ಲುತ್ತಾರೆ. ಬಸವಣ್ಣನವರ ವಚನಗಳು ಮತ್ತು ಹರಿಹರನ ರಗಳೆಗಳಲ್ಲಿ ದಾಸಿಮಯ್ಯರ ಬಗ್ಗೆ ವಿವರಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 10ನೇ ತರಗತಿಯಲ್ಲಿ ಶೇ.95 ಅಂಕಗಳನ್ನು ಪಡೆದ ಅಂಧ ವಿದ್ಯಾರ್ಥಿನಿ ಯುಕ್ತಾಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪಾಲಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಉಮೇಶ್ ಮತ್ತು ಸಮಾಜದ ಮುಖಂಡರು ಹಾಜರಿದ್ದರು.