ಇಂದಿನ ಯುವ ಪೀಳಿಗೆ ಸಿದ್ದಯ್ಯ ಪುರಾಣಿಕ, ದೇವೇಂದ್ರ ಕುಮಾರ್ ಹಕಾರಿ ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರ ಸಾಹಿತ್ಯ ಕೃತಿ ಓದಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯ

ಕುಕನೂರು: ಸಾಹಿತ್ಯದಲ್ಲಿ ಗಟ್ಟಿತನ ಬಂದಿರುವುದೇ ವಚನ ಸಾಹಿತ್ಯದ ಮೂಲಕ ಎಂದು ಉಪನ್ಯಾಸಕ ಗಂಗಾಧರ ಅವಟೆರ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ವಸತಿ ನಿಲಯದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಜರುಗಿದ ಲೇಖಕಿ ಗೀತಾ ಮಲ್ಲನಗೌಡರ ಅವರ ವಚನ ಸಿರಿ ಕೃತಿ ಲೋಕಾಪ೯ಣೆ ಹಾಗೂ ಕವಿಗೋಷ್ಠಿ ಸಮಾರಂಭವನ್ನೂದ್ದೇಶಿಸಿ ಮಾತನಾಡಿದ ಅವರು, ವಚನವು ಪದ್ಯವೂ ಅಲ್ಲ, ಗದ್ಯವು ಅಲ್ಲ, ಹಾಗಾಗಿ ಅನೇಕ ಶರಣರು ಸಮಾಜವನ್ನು ವಚನಗಳ ಮೂಲಕ ಸುಧಾರಿಸಿದ್ದಾರೆ,ಇಂದಿನ ಯುವ ಪೀಳಿಗೆ ಸಿದ್ದಯ್ಯ ಪುರಾಣಿಕ, ದೇವೇಂದ್ರ ಕುಮಾರ್ ಹಕಾರಿ ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರ ಸಾಹಿತ್ಯ ಕೃತಿ ಓದಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯ, ವಚನ ಸಿರಿ ಕೃತಿಯು ಉತ್ತಮ ಸಂದೇಶ ನೀಡುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ವೀರಣ್ಣ ವಾಲಿ ಮಾತನಾಡಿ, ಜಗತ್ತಿನ ಪ್ರಸಿದ್ಧ ಸಾಹಿತ್ಯ ರತ್ನಗಳು ನಮ್ಮೆಲ್ಲ ಬರವಣಿಗೆಗೆ ಸ್ಫೂತಿ೯ ನೀಡುತ್ತಿವೆ. ಮಹಾನ್ ದಿಗ್ಗಜರ ಆಶಯ ಉದಾಹರಿಸಿ ಉತ್ತಮ ಸಾಹಿತ್ಯ ರಚನೆಗೆ ಮುಂದಾಗಬೇಕೆಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಲೇಖಕಿ ಗೀತಾ ಮಲ್ಲನಗೌಡರ, ಪರಿಷತ್ತಿನ ಅಧ್ಯಕ್ಷ ಕಳಕಪ್ಪ ಕುಂಬಾರ, ಸಾಹಿತಿ ಶಿವ ಪ್ರಸಾದ ಹಾದಿಮನಿ, ಬಳಗೆರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹೇಶ್ ಗೌಡ ಮಲ್ಲನಗೌಡರ, ನಿಲಯ ಮೇಲ್ವಿಚಾರಕ ರಾಮಚಂದ್ರಪ್ಪ ಹಣಗಿ, ರವಿ ಹಿರೇಮನಿ , ಮೇಘರಾಜ ಜೀಡಗಿ ಸೇರಿದಂತೆ ಇತರರು ಭಾಗವಹಿಸಿದ್ದರು. ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ್ ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು.

ಕವಿಗೋಷ್ಠಿಯಲ್ಲಿ ಭೋಜರಾಜ ಸೊಪ್ಪಿಮಠ, ವೀರೇಶ್ ಕುರಿ, ರಹೀಂ ಸಾಹೇಬ್, ಬಸವರಾಜ್ ಚೌಡಕಿ, ಮಹಾಲಕ್ಷ್ಮಿ ಮುಂಡರಗಿ, ರಾಣಿ ಹಳ್ಳಿ, ಮಾರುತಿ ಜೀವಣ್ಣವರ್ ಕವಿತೆಗಳನ್ನು ವಾಚಿಸಿದರು.ವಸಂತ ಗುಡಿ ನಿರೂಪಿಸಿದರು.