ಸಾರಾಂಶ
ಶರಣ ಶರಣೆಯರ ಎಲ್ಲಾ ವಚನಗಳಲ್ಲಿ ಸಾರ್ವತ್ರಿಕ ಜೀವನಮೌಲ್ಯಗಳು ತುಂಬಿವೆ ಎಂದು ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾದ ಭವಾನಮ್ಮ ಗುರುಮಲ್ಲಪ್ಪ ಅಭಿಪ್ರಾಯಪಟ್ಟರು.
ತುಮಕೂರು: ಶರಣ ಶರಣೆಯರ ಎಲ್ಲಾ ವಚನಗಳಲ್ಲಿ ಸಾರ್ವತ್ರಿಕ ಜೀವನಮೌಲ್ಯಗಳು ತುಂಬಿವೆ ಎಂದು ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾದ ಭವಾನಮ್ಮ ಗುರುಮಲ್ಲಪ್ಪ ಅಭಿಪ್ರಾಯಪಟ್ಟರು.
ನಗರದ ಗ್ಲೋಬಲ್ ಪೀಸ್ ಸಭಾಂಗಣದಲ್ಲಿ ನಡೆದ ಶಿವಕುಮಾರ ಸ್ವಾಮೀಜಿಗಳ 45ನೆಯ ಮಾಸಿಕ ಶರಣ ಚಿಂತನ ಕಾರ್ಯಕ್ರಮದಲ್ಲಿ ‘ವಚನಗಳಲ್ಲಿನ ಸರಳ ಮೌಲ್ಯಗಳು’ ವಿಷಯವಾಗಿ ಮಾತನಾಡಿದರು.ಅಂದಿನ ಶರಣ ಶರಣೆಯರಲ್ಲಿ ಸಾಮಾಜಿಕ ಚಿಂತನೆ ಇತ್ತು. ರಾಜಾಶ್ರಯದಿಂದ ದೂರವಿದ್ದರು. ಯಾರ ಹಂಗೂ ಇರಲಿಲ್ಲ. ಜನರ ಮಧ್ಯೆ ಬೆರೆತು ಸರಳ ಸೂತ್ರ ಪ್ರಾಯದ ವಚನಗಳನ್ನು ರಚಿಸಿದರು. ಆ ಸಾಹಿತ್ಯ ಕನ್ನಡ ಭಾಷೆಯ ಅಮೂಲ್ಯ ಆಸ್ತಿಯಾಯ್ತು ಎಂದರು.
ಉದ್ಘಾಟನೆ ಮಾಡಿ ಮಾತನಾಡಿದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರಯ್ಯ ಈಚನೂರು ಮಾತನಾಡಿ, ಒಬ್ಬೊಬ್ಬ ಶರಣ, ಶರಣೆಯರೂ ಸಂಸಾರದಲ್ಲಿದ್ದರೂ ಕಾಯಕ ಮತ್ತು ದಾಸೋಹವನ್ನೇ ಪರಮ ಗುರಿಯಾಗಿ ಸ್ವೀಕರಿಸಿದ್ದರು. ಬಸವಣ್ಣನಂಥವರನ್ನು ಸಾಮಾಜಿಕ ಸಾಂಸ್ಕೃತಿಕ ನಾಯಕನನ್ನಾಗಿ ಸ್ವೀಕರಿಸಿದ ದೇಶದ ನಾನಾ ಕಡೆಗಳಿಂದ ಶರಣರು ಕಲ್ಯಾಣದತ್ತ ಬಂದು ಸಾಮೂಹಿಕವಾಗಿ ಚಿಂತಿಸಿದ ಫಲಗಳೇ ವಚನಗಳೆಂದು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ಎಂ.ಜಿ. ಸಿದ್ಧರಾಮಯ್ಯ ಮಾತನಾಡಿ, ಶರಣರು ಎಂದೂ ಸ್ವಾರ್ಥ ಪರರಾಗದೇ ನಿಸ್ವಾರ್ಥಿಗಳಾಗಿದ್ದುದರಿಂದ ಅವರ ರಚನೆಯ ವಚನಗಳು ಕೂಡ ಮೌಲ್ಯಗಳಿಂದ ಕೂಡಿದ್ದವು. ಅಲ್ಲಿ ಯಾವುದೇ ಭೇದಭಾವಗಳು ಇರಲಿಲ್ಲ. ಒಂದೇ ಜಾತಿ, ಅದು ಮಾನವ ಜಾತಿ. ಒಂದೇ ಧರ್ಮ, ಅದು ಮಾನವ ಧರ್ಮ ಎಂಬ ಉದಾತ್ತ ಚಿಂತನೆಗಳು ವಚನಗಳಲ್ಲಿವೆ ಎಂದರು.
ಪ್ರಾಸ್ತಾವಿಕವಾಗಿ ಮಿಮಿಕ್ರಿ ಈಶ್ವರಯ್ಯ ಮಾತನಾಡಿದರು. ಹಂ.ಸಿ.ಕುಮಾರಸ್ವಾಮಿ ನಿರೂಪಿಸಿದರು. ರವೀಂದ್ರನಾಥ ಠಾಗೂರ್ ಸ್ವಾಗತಿಸಿದರು. ಲತಾಮಣಿ, ಭವಾನಮ್ಮ, ಶಿವಲಿಂಗಯ್ಯ, ಅನಂತರಾಜು, ಪ್ರಕಾಶಮೂರ್ತಿ ವಚನ ಗಾಯನ ಮಾಡಿದರು. ಬಿ. ರಾಜಶೇಖರಯ್ಯ ಶರಣು ಸಮರ್ಪಿಸಿದರು.