ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಅಂತಃರಂಗ ಶುದ್ಧಗೊಳಿಸುವ ವಚನಾಧ್ಯಯನವನ್ನು ಆಧುನಿಕ ಕಾಲಘಟ್ಟದಲ್ಲಿ ಹೆಚ್ಚು ಪ್ರಚುರಪಡಿಸಬೇಕಿದೆ ಎಂದು ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ಹೇಳಿದರು.ಮೂಡಲಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾನಪದ ಪರಿಷತ್‌ನಿಂದ ನೀಲಕಂಠೇಶ್ವರ ಮಠದಲ್ಲಿ ಏರ್ಪಡಿಸಿದ್ದ ಡಾ.ಮಹಾದೇವ ಪೋತರಾಜರಿಂದ ರಚಿತವಾದ ಸುವರ್ಣದೀಪ ವಚನ ಸಂಕಲನ ಬಿಡುಗಡೆ ಮತ್ತು ವಿಶ್ವಜಾನಪದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಕೃತಿಯ ಕುರಿತು ಮಾತನಾಡಿ, 12ನೇ ಶತಮಾನದ ಶರಣರ ವಚನಗಳಿಂದ ಪ್ರಭಾವಿತರಾಗಿರುವ ಡಾ.ಮಹಾದೇವ ಪೋತರಾಜ ಅವರು ರಚಿಸಿರುವ ಸುವರ್ಣ ದೀಪ ಆಧುನಿಕ ವಚನ ಸಂಕಲನ ಸಮಾಜಕ್ಕೆ ಸಂದೇಶ ನೀಡಿದೆ ಎಂದರು.
182 ವಚನ ಹೊಂದಿರುವ ಸುವರ್ಣ ದೀಪ ಕೃತಿಯಲ್ಲಿ ಆತ್ಮಾವಲೋಕನ, ಅಂತಃಕರಣಗಳ ಅನುಷ್ಠಾನದ ಮೂಲಕ ಮಾನವ ಸನ್ಮಾರ್ಗದ ಪಥಿಕನಾಗಬೇಕೆಂಬ ಚಿಂತನೆ ಬಿಂಬಿಸಲಾಗಿದೆ ಎಂದರು.ವಚನಗಳ ಓದು, ಅರ್ಥೈಸುವಿಕೆ ಹಾಗೂ ಅಳವಡಿಕೆಗಳಿಂದ ಬದುಕು ಸುಂದರವಾಗುತ್ತದೆ. ಸಮಾನತೆ, ಕರುಣೆ, ಮನಶುದ್ಧತೆ ಹಾಗೂ ಮಾನವೀಯತೆಯ ಮೂಲಕವೇ ಭಕ್ತಿಮಾರ್ಗ ರೂಪಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳುವುದು ಶರಣರ ಸಾಹಿತ್ಯದ ಆಶಯವಾಗಿತ್ತು ಎಂದರು.
ಹಾರೂಗೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಬಿ. ಕೊಕಟನೂರ ಮಾತನಾಡಿದರು.ಮುಖ್ಯ ಅತಿಥಿಗಳಾದ ಬಾಲಶೇಖರ ಬಂದಿ, ಕಲ್ಲೋಳಿಯ ಪದವಿ ಕಾಲೇಜು ಪ್ರಾಚಾರ್ಯ ಡಾ.ಸುರೇಶ ಹನಗಂಡಿ, ಕೃತಿಕಾರ ಡಾ.ಮಹಾದೇವ ಪೋತರಾಜ, ಅಧ್ಯಕ್ಷತೆ ವಹಿಸಿದ್ದ ಕಸಾಪ ಕಾರ್ಯದರ್ಶಿ ಅಣ್ಣಪ್ಪ ವಂಟಗೋಡಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಅತಿಥಿಗಳಾಗಿ ನೀಲಕಂಠ ಸೇವಾ ಸಮಿತಿ ಅಧ್ಯಕ್ಷ ಈಶ್ವರ ಮುರಗೋಡ, ಜಿ.ಕೆ. ಮುರಗೋಡ, ಸಾಹಿತಿ ಸಿದ್ರಾಮ ದ್ಯಾಗಾನಟ್ಟಿ, ಚುಸಾಪ ಅಧ್ಯಕ್ಷ ಚಿದಾನಂದ ಹೂಗಾರ, ಹಳ್ಳೂರದ ಸಿದ್ದು ಮಹಾರಾಜ, ನಿಂಗಪ್ಪ ಸಂಗ್ರೋಜಿಕೊಪ್ಪ, ಬಿ.ವೈ. ಶಿವಾಪುರ, ಬಸವರಾಜ ತರಕಾರ, ಸುಭಾಷ ಕಡಾಡಿ, ಶಾನೂರ ಐಹೊಳಿ, ಬಿ.ಸಿ. ಹೆಬ್ಬಾಳ, ಶಿವಾನಂದ ಚಂಡಕಿ, ಬಿ.ಎ. ದೇಸಾಯಿ, ಪೂರ್ಣಿಮಾ ಯಲಿಗಾರ, ಶಶಿರೇಖಾ ಬೆಳ್ಳಕ್ಕಿ, ಭಾಗೀರಥಿ ಕುಳಲಿ, ಖನ್ನವ್ವ ಸೊಪ್ಪಾಡಲಾ ಮತ್ತಿತರರು ಇದ್ದರು.ಕಮಲಾಬಾಯಿ ಚಂದ್ರಪ್ಪ ಪೋತರಾಜ, ಚಿತ್ರಕಲಾ ಶಿಕ್ಷಕ ಸುಭಾಷಕುರಣಿ, ನಾಗಪ್ಪಗಡಾದ ಹಾಗೂ ಕೃತಿಕಾರ ಮಹಾದೇವ ಪೋತರಾಜ ಅವರನ್ನು ಸನ್ಮಾನಿಸಿದರು. ನಾಗೇಂದ್ರ ಮಾನೆ, ಚುಟುಕುಸಾಬ ಜಾತಿಗಾರ ಅವರು ಸಂಬಾಳವಾದನ ನುಡಿಸಿ ಎಲ್ಲರ ಮೆಚ್ಚುಗೆ ಪಡೆದರು. ಶಿವಕುಮಾರ ಕೋಡಿಹಾಳ ಮತ್ತು ಗೀತಾ ಹಿರೇಮಠ ನಿರೂಪಿಸಿದರು.