ಸಾರಾಂಶ
ಪಡುಬಿದ್ರಿ- ಬೆಳ್ಮಣ್ -ಕಾರ್ಕಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ನಿರ್ಮಿಸಲಾದ ಉಬ್ಬು ತಗ್ಗುಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು ಇಲ್ಲವೇ ತೆಗೆಯಬೇಕು ಎಂದು ಕೆನರಾ ಬಸ್ ಮಾಲಕರ ಸಂಘ ಉಪಾಧ್ಯಕ್ಷ ಜೀವಂಧರ ಅತಿಕಾರಿ ಅಜೆಕಾರು ಬೇಡಿಕೆಯಿಟ್ಟರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಎಲ್ಲ ಖಾಸಗಿ ಬಸ್‌ಗಳಲ್ಲಿಯೂ ವ್ಯಾಕ್ಯೂಂ ಡೋರ್ ಅಳವಡಿಸುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಕೆನರಾ ಬಸ್ ಮಾಲಕರ ಸಂಘ ಉಪಾಧ್ಯಕ್ಷ ಜೀವಂಧರ ಅತಿಕಾರಿ ಅಜೆಕಾರು ಹೇಳಿದರು.ಅವರು ಕಾರ್ಕಳ ಅನಂತ ಶಯನದ ರೋಟರಿ ಬಾಲಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಿಟ್ಟೆಯಲ್ಲಿ ಇತ್ತೀಚೆಗೆ ಬಸ್‌ನಿಂದ ಬಿದ್ದು ಮೃತಪಟ್ಟ ವಿದ್ಯಾರ್ಥಿ ಮಾಳ ಗ್ರಾಮದ ಹುಕ್ರಟ್ಟೆಯ ಜನಿತ್ ಶೆಟ್ಟಿಗೆ ಸಂತಾಪ ಸೂಚಿಸಿ ಮಾತನಾಡಿ, ಕಾರ್ಕಳ-ಬೆಳ್ಮಣ್ -ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಅವೈಜ್ಞಾನಿಕ ಉಬ್ಬು ತಗ್ಗುಗಳನ್ನು ನಿರ್ಮಿಸಿರುವ ಕಾರಣ ಬ್ರೇಕ್ ಹಾಕಿದ್ದ ಸಂದರ್ಭ ಉಬ್ಬು ರಸ್ತೆಯಿಂದ ಬಸ್ ಜಂಪ್ ಆದಾಗ ಫುಟ್ ಬೋರ್ಡಿನಲ್ಲಿದ್ದ ವಿದ್ಯಾರ್ಥಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತಪಟ್ಟ ವಿದ್ಯಾರ್ಥಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.ಪಡುಬಿದ್ರಿ- ಬೆಳ್ಮಣ್ -ಕಾರ್ಕಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ನಿರ್ಮಿಸಲಾದ ಉಬ್ಬು ತಗ್ಗುಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು ಇಲ್ಲವೇ ತೆಗೆಯಬೇಕು ಎಂದು ಬೇಡಿಕೆಯಿಟ್ಟರು.ಬಸ್‌ನಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಸಮಯಪಾಲಕರು ಕೂಡ ಸಹಕಾರ ನೀಡಬೇಕು. ಸಾರಿಗೆ ವ್ಯವಸ್ಥೆಯಲ್ಲಿ ಅಪಘಾತ ರಹಿತ ಸೇವೆಯೊಂದಿಗೆ ಪ್ರಯಾಣಿಕರೊಂದಿಗೆ ಪ್ರತಿಯೊಬ್ಬ ಚಾಲಕ, ನಿರ್ವಾಹಕನೂ ಸೌಜನ್ಯದಿಂದ ವರ್ತಿಸುವಂತೆ ನಿರ್ದೇಶನ ನೀಡುತ್ತೇವೆ, ಸಮವಸ್ತ್ರ ಧರಿಸಿ ಬಸ್ ಚಾಲಕರು ಹಾಗೂ ಬಸ್ ನಿರ್ವಾಹಕರು ಕಾರ್ಯನಿರ್ವಹಿಸಬೇಕು ಎಂದರು.ಬಸ್ ಮಾಲಕ ಹಾಗೂ ಕಾರ್ಕಳ ರೋಟರಿ ಅಧ್ಯಕ್ಷ ಇಕ್ಬಾಲ್ ಮಾತನಾಡಿ, ಅಪಘಾತ ರಹಿತ ಹಾಗೂ ಪ್ರಯಾಣಿಕರೊಂದಿಗಿನ ಉತ್ತಮ ರೀತಿಯಲ್ಲಿ ಸೇವೆ ನೀಡಲುವ ಸಲುವಾಗಿ ಚಾಲಕ ನಿರ್ವಾಹಕರಿಗೆ ಶೀಘ್ರದಲ್ಲೇ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭ ಬಸ್ ಮಾಲಕರಾದ ಗೋಪಿನಾಥ್ ಭಟ್, ಅತುಲ್ ಅಡ್ಯಾಂತಾಯ ಮೊದಲಾದವರು ಉಪಸ್ಥಿತರಿದ್ದರು.