ಸಾರಾಂಶ
ವಡಗೇರಾ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ಇರುವ ವಾರ್ಡ್ ಗಳಿಗೆ ರೈತ ಸಂಘದ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ)ದ ಜಿಲ್ಲಾಧ್ಯಕ್ಷರಾದ ಮಲ್ಲಣ್ಣಗೌಡ ಹಗರಟಗಿ ಆಗ್ರಹಿಸಿದರು.ವಡಗೇರಾ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ಇರುವ ವಾರ್ಡ್‌ಗಳಿಗೆ ಗ್ರಾಮ ಪಂಚಾಯ್ತಿ ಅಧಿಕಾರಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಈಗಾಗಲೇ ತೀವ್ರ ಬಿಸಿಲು ಆರಂಭಿಸಿದ್ದು, ಕುಡಿವ ನೀರಿಗಾಗಿ ಜನ-ಜಾನುವಾರುಗಳು ತತ್ತರಿಸಿ ಹೋಗಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ತೀವ್ರ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಮರಿಯಮ್ಮ ದೇವಸ್ಥಾನ ಹತ್ತಿರ ಇರುವ ಸುಮಾರು 60ಕ್ಕೂ ಹೆಚ್ಚು ದಲಿತರ ಮನೆಗಳಿಗೆ ನೀರು ಬರುತ್ತಿಲ್ಲ ಎಂದು ಅಲ್ಲಿನ ಸ್ಥಳೀಯರು ಅಧಿಕಾರಿಗಳ ಎದುರು ತಮ್ಮ ಅಳಲು ತೋಡಿಕೊಂಡರು.
ಪಟ್ಟಣದ ಸುತ್ತಮುತ್ತ ಇರುವ ಬಾವಿಗಳಲ್ಲಿನ ಹೂಳು ತೆಗೆಸಿ ದುರಸ್ತಿಯಲ್ಲಿರುವ ಕೊಳವೆಬಾವಿ ದುರಸ್ತಿಗೊಳಿಸಿ ಪಟ್ಟಣಕ್ಕೆ ಸಮರ್ಪಕ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ದನಕರುಗಳಿಗೆ ಕುಡಿಯಲು ಅಲ್ಲಲ್ಲಿ ನೀರಿನ ತೊಟ್ಟಿ ನಿರ್ಮಾಣ ಹಾಗೂ ಕೆಟ್ಟು ನಿಂತಿರುವ ನೀರಿನ ಶುದ್ಧೀಕರಣ ಘಟಕ ದುರಸ್ತಿ ಮಾಡಬೇಕು. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಲ್ಲಿ ಗ್ರಾಮ ಪಂಚಾಯ್ತಿಗೆ ಬೀಗ ಮುದ್ರೆ ಹಾಕಿ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕೋಬ ಕಟ್ಟಿಮನಿ, ತಾಲೂಕಾಧ್ಯಕ್ಷ ವಿದ್ಯಾಧರ್ ಜಾಕಾ, ಗೌರವಾಧ್ಯಕ್ಷ ಶರಣು ಜಡಿ, ಹಳ್ಳೆಪ್ಪ ತೇಜೇರ, ನಿಂಗು, ಮಲ್ಲು ನಾಟೇಕಾರ, ನಾಗರಾಜ್ ಹಿರೇಮಠ, ಮಹ್ಮದ್ ಗ್ಯಾರೇಜ್, ವೆಂಕಟೇಶ್ ಇಟಗಿ, ಬೀರಪ್ಪ ಜಡಿ, ಶಿವು ಗೋನಾಲ ಸೇರಿದಂತೆ ಇತರರು ಎಚ್ಚರಿಕೆ ನೀಡಿದರು.