ಸಾರಾಂಶ
ಪಟ್ಟಣದ ಹೊರವಲಯದಲ್ಲಿನ ಶ್ರೀ ಸಮಗಂಡಿ ಮಲ್ಲಯ್ಯತಾತನ ಜಾತ್ರೆ ಶ್ರಾವಣ ಮಾಸದ ಕೊನೆ ಸೋಮವಾರ ವೈಭವದಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಕನಕಗಿರಿ
ಪಟ್ಟಣದ ಹೊರವಲಯದಲ್ಲಿನ ಶ್ರೀ ಸಮಗಂಡಿ ಮಲ್ಲಯ್ಯತಾತನ ಜಾತ್ರೆ ಶ್ರಾವಣ ಮಾಸದ ಕೊನೆ ಸೋಮವಾರ ವೈಭವದಿಂದ ನೆರವೇರಿತು.ತಾತನ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಇದಕ್ಕೂ ಮೊದಲು ಮಲ್ಲಯ್ಯತಾತ ಭಜನಾ ಮಂಡಳಿ ವತಿಯಿಂದ ನಗರದ ವಿವಿಧ ದೇವಸ್ಥಾನಗಳಿಗೆ ಭಜನೆಯೊಂದಿಗೆ ಭೇಟಿ ನೀಡಿ, ದೀಪಾರಾಧನೆ, ತೆಂಗಿನಕಾಯಿ ಸಮರ್ಪಣಾ ಕಾರ್ಯಕ್ರಮ ನಡೆಯಿತು. ಭಕ್ತರು ಭಜನೆಯಲ್ಲಿ ಪಾಲ್ಗೊಂಡು ಭಜನಾ ಹಾಡುಗಳ ಮೂಲಕ ಮಲ್ಲಯ್ಯ ತಾತನನ್ನು ಸ್ಮರಿಸುವ ಮೂಲಕ ತಿಂಗಳ ಪರ್ಯಂತ ಗ್ರಾಮ ಪ್ರದಕ್ಷಣೆ ಕಾರ್ಯಕ್ರಮವನ್ನು ಸಂಪನ್ನಗೊಂಡಿತು.ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಹೋದರ ರವಿ ತಂಗಡಗಿ ಭೇಟಿ ನೀಡಿ, ತಾತನ ದರ್ಶನ ಪಡೆದರು.
ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಪ್ರಮುಖರಾದ ಬಸವಂತಗೌಡ ಪಾಟೀಲ್, ಹೊನ್ನೂರುಸಾಬ ಮೇಸ್ತ್ರಿ, ಕಂಠಿರಂಗಪ್ಪ ನಾಯಕ, ನಾಗರಾಜ ಬೊಂದಾಡೆ, ಶಾಂತಪ್ಪ ಬಸರಿಗಿಡದ, ವಿರೇಶ ಗೊಬ್ಬರದಂಗಡಿ, ಮಲ್ಲಯ್ಯ ಸಮಗಂಡಿ ಇತರರಿದ್ದರು.ಹಿರೇಹಳ್ಳದ ಬಸವೇಶ್ವರ ಜಾತ್ರೆ-ಗಮನ ಸೆಳೆದ ನಂದಕೋಲು ಕುಣಿತ:
ಕನಕಗಿರಿ ಪಟ್ಟಣದ ಲಕ್ಷ್ಮೀದೇವಿ ಕೆರೆ ಪರಿಸರದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಹಿರೇಹಳ್ಳದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ನಂದಿಕೋಲು ಕುಣಿತ ಗಮನ ಸೆಳೆಯಿತು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದ ಕಡೆ ಸೋಮವಾರ ದಿನ ನಡೆಯುವ ಈ ಜಾತ್ರೆಯಲ್ಲಿ ನಂದಿಕೋಲು ಕುಣಿತ ಮೆರಗು ತರಲಿದೆ. ಬರೋಬ್ಬರಿ ೭೦ ಅಡಿ ಎತ್ತರದ ನಂದಿಕೋಲನ್ನು ಎತ್ತಿ ಕುಣಿದು ಸಂಭ್ರಮಿಸುವುದು ಇಂದಿಗೂ ರೂಢಿಯಲ್ಲಿದೆ. ಹೀಗೆ ಒಬ್ಬರ ನಂತರ ಒಬ್ಬರು ಸದರಿಯಲ್ಲಿ ನಂದಿಕೋಲನ್ನು ಹೊತ್ತು ಕುಣಿದು ಹರಕೆ ತೀರಿಸುವ ಪದ್ಧತಿಯೂ ಇದೆ.
ಜಾತ್ರೆ ನಿಮಿತ್ತ ಪ್ರಾತಃ ಕಾಲದಲ್ಲಿ ನಂದಿ ವಿಗ್ರಹಕ್ಕೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಲಂಕಾರ ಸೇರಿದಂತೆ ನಾನಾ ಪೂಜಾ ವಿಧಿ-ವಿಧಾನಗಳು ಜರುಗಿದವು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನಾನಾ ಗ್ರಾಮಗಳ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಸ್ನೇಹಿತರು, ಕುಟುಂಬಸ್ಥರು ಕೂಡಿ ಮಂಡಕ್ಕಿ-ಖಾರದ ಜತೆಗೆ ಮಿರ್ಚಿ ಸವಿದು ಖುಷಿಪಟ್ಟರು.