ಚನ್ನಪಟ್ಟಣ: ಬೆಂಗಳೂರು ದಕ್ಷಿಣ ಜಿಲ್ಲಾ ಗ್ರಂಥಾಲಯ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಚನ್ನಪಟ್ಟಣ ತಾಲೂಕಿನ ಜೆ. ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕ ಬಿ.ಕೆ. ವೈದ್ಯೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಚನ್ನಪಟ್ಟಣ: ಬೆಂಗಳೂರು ದಕ್ಷಿಣ ಜಿಲ್ಲಾ ಗ್ರಂಥಾಲಯ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಚನ್ನಪಟ್ಟಣ ತಾಲೂಕಿನ ಜೆ. ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕ ಬಿ.ಕೆ. ವೈದ್ಯೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಗ್ರಂಥಾಲಯ ನೌಕರರ ಹಿತರಕ್ಷಣೆ, ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿ ಹಾಗೂ ಗ್ರಾಮೀಣ ಓದು ಸಂಸ್ಕೃತಿಗೆ ಹೊಸ ಚೈತನ್ಯ ತುಂಬುವ ಉದ್ದೇಶದೊಂದಿಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬೆಂಗಳೂರು ದಕ್ಷಿಣ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಚನ್ನಕೇಶವ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಂಥಾಲಯ ಮೇಲ್ವಿಚಾರಕರು ಭಾಗವಹಿಸಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಸಿದರು. ಬಳಿಕ ಸರ್ವಾನುಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ಗೌರವಾಧ್ಯಕ್ಷರಾಗಿ ಕೊಟ್ಟಗಾಳು ಗ್ರಂಥಾಲಯ ಮೇಲ್ವಿಚಾರಕ ರಾಜೇಶ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ನೀಲಸಂದ್ರ ಗ್ರಂಥಾಲಯ ಮೇಲ್ವಿಚಾರಕಿ ಶಿಲ್ಪಾ (ಶಿವರುದ್ರಮ್ಮ) ನೇಮಕಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಮಾಗಡಿ ತಾಲೂಕಿನ ನೇತೇನಹಳ್ಳಿ ಗ್ರಂಥಾಲಯದ ಚಿಕ್ಕಣ್ಣ ಆಯ್ಕೆಯಾಗಿದ್ದು, ಸಂಚಾಲಕರಾಗಿ ಮಾಗಡಿ ಚಿಕ್ಕಹಳ್ಳಿ ಗ್ರಂಥಾಲಯದ ನಾಗೇಂದ್ರ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ನೂತನ ನಿರ್ದೇಶಕರು: ಜಿಲ್ಲಾ ಸಂಘದ ನಿರ್ದೇಶಕರಾಗಿ ಅದರಂಗಿ ಗ್ರಂಥಾಲಯದ ನರಸಿಂಹಮೂರ್ತಿ, ಮತ್ತೀಕೆರೆಯ ಕೆಂಪೇಗೌಡ, ಎಲೆತೋಟದಹಳ್ಳಿಯ ಶಿವಲಿಂಗಯ್ಯ, ಮರಳೆಬೇಕುಪ್ಪೆಯ ಉಮೇಶ್ ಎಂ.ಎಂ., ದಶವಾರದ ಶಿವಲಿಂಗಯ್ಯ, ಹೂಕುಂದ ಗ್ರಂಥಾಲಯ ಶಿವರಂಜಿನಿ, ಐಗೊಲ್ಲಹಳ್ಳಿಯ ಶಿವಲಿಂಗೇಗೌಡ, ಹುಣಸನಹಳ್ಳಿಯ ಕಲ್ಪನಾ, ಯಲಚವಾಡಿಯ ವೆಂಕಟೇಶ್, ಬನವಾಸಿಯ ಸುನಂದಮ್ಮ, ರಾಮನಗರದ ಬಿಳಗುಂಬ ಗ್ರಂಥಾಲಯದ ಅನಿತಾ, ಹರೀಸಂದ್ರದ ಪ್ರಮೀಳಾ ಅವರನ್ನು ಆಯ್ಕೆ ಮಾಡಲಾಗಿದೆ.

ಓದು ಅಭಿರುಚಿ ಬೆಳೆಸಲು ಕಾರ್ಯಕ್ರಮ:

ನೂತನ ಅಧ್ಯಕ್ಷ ಬಿ.ಕೆ. ವೈದ್ಯೇಗೌಡ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಗ್ರಂಥಾಲಯಗಳನ್ನು ಕೇವಲ ಪುಸ್ತಕ ಸಂಗ್ರಹ ಕೇಂದ್ರಗಳಾಗಿ ಮಾತ್ರವಲ್ಲದೆ, ಜ್ಞಾನ ವಿಸ್ತರಣೆಯ ಸಕ್ರಿಯ ಕೇಂದ್ರಗಳನ್ನಾಗಿ ರೂಪಿಸುವ ದಿಸೆಯಲ್ಲಿ ಸಂಘ ಕಾರ್ಯನಿರ್ವಹಿಸಲಿದೆ. ಗ್ರಂಥಾಲಯ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಓದು ಅಭಿರುಚಿ ಬೆಳೆಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಗ್ರಂಥಾಲಯಗಳ ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ವ್ಯವಸ್ಥೆಗಳ ಅಳವಡಿಕೆ, ಓದುಗರ ಸಂಖ್ಯೆ ಹೆಚ್ಚಿಸುವ ಯೋಜನೆಗಳು ಹಾಗೂ ನೌಕರರ ಸೇವಾ ಹಿತಾಸಕ್ತಿ ಕುರಿತಂತೆ ಸಮಗ್ರ ಚರ್ಚೆ ನಡೆಯಿತು. ಜಿಲ್ಲೆಯಾದ್ಯಂತ ಗ್ರಂಥಾಲಯ ಸೇವೆಯನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸಲು ಎಲ್ಲ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಪೊಟೋ೨೯ಸಿಪಿಟಿ೧:

ಬೆಂಗಳೂರು ದಕ್ಷಿಣ ಜಿಲ್ಲಾ ಗ್ರಂಥಾಲಯ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ. ವೈದ್ಯೇಗೌಡ ಅವರನ್ನು ಅಭಿನಂದಿಸಲಾಯಿತು.