ಜಿಲ್ಲೆಯ ವಿವಿಧೆಡೆ ವೈಕುಂಠ ಏಕಾದಶಿ ಸಂಭ್ರಮ

| Published : Jan 11 2025, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ೫ ಗಂಟೆಗೆ ಶ್ರೀ ಕೋದಂಡರಾಮಚಂದ್ರಸ್ವಾಮಿಗೆ ಸುಪ್ರಭಾತ ಸೇವೆ, ವೇದಪಠಣ, ಅಭಿಷೇಕ,, ಅಲಂಕಾರ, ವಿಶೇಷ ಪೂಜೆ ನೇರವೇರಿತು.

- ನಗರದ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ಹಾದು ರಾಮನ ದರ್ಶನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ೫ ಗಂಟೆಗೆ ಶ್ರೀ ಕೋದಂಡರಾಮಚಂದ್ರಸ್ವಾಮಿಗೆ ಸುಪ್ರಭಾತ ಸೇವೆ, ವೇದಪಠಣ, ಅಭಿಷೇಕ,, ಅಲಂಕಾರ, ವಿಶೇಷ ಪೂಜೆ ನೇರವೇರಿತು.

ಸಾವಿರಾರು ಭಕ್ತರು ಸರತಿಯಲ್ಲಿ ಬಂದು ಉತ್ತರ ದಿಕ್ಕಿನ ಬಾಗಿಲ ಮೂಲಕ ವೈಕುಂಠ ದ್ವಾರವನ್ನು ಹಾದು ರಾಮನ ದರ್ಶನ ಪಡೆದರು. ಸಂಜೆವರೆಗೆ ಭಕ್ತಗಣ ನಿರಂತವಾಗಿ ಹರಿದು ಬರುತ್ತಲೇ ಇತ್ತು.

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಬೆಳಗ್ಗೆ ೫ ಗಂಟೆಗೆ ಶ್ರೀ ಕೋದಂಡರಾಮಚಂದ್ರಸ್ವಾಮಿಗೆ ಸುಪ್ರಭಾತ ಸೇವೆ, ವೇದ ಪಠಣ, ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನಡೆಯಿತು. ಮಹಾಮಂಗಳಾರತಿ ನಂತರ ಬೆಳಗ್ಗೆ ೫.೩೦ ಕ್ಕೆ ಗರ್ಭಗುಡಿ ಯಿಂದ ಉತ್ಸವ ಮೂರ್ತಿಯನ್ನು ಹೊರತಂದು ದೇವಾಲಯದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಯಿತು. ವೈಕುಂಠ ದ್ವಾರಕ್ಕೆ ಪೂಜೆ ಸಲ್ಲಿಸಿದ ಬಳಿಕ ವೈಕುಂಠ ದ್ವಾರದ ಮೂಲಕ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಮೇಲ್ಬಾಗದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.ವರ್ಷಕ್ಕೊಮ್ಮೆ ಮಾತ್ರ ವೈಕುಂಠ ದ್ವಾರದ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ನಗರ, ಸುತ್ತಮುತ್ತಲ ಗ್ರಾಮ ಹಾಗೂ ರಾಜ್ಯದ ವಿವಿಧ ಭಾಗದಿಂದ ಭಕ್ತರು ಆಗಮಿಸಿದ್ದರು. ಮೈ ಕೊರೆವ ಮಾಗಿ ಚಳಿಯನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ಕಾಯುತ್ತಾ ನಿಂತು ವೈಕುಂಠ ದ್ವಾರ ತೆರೆಯುತ್ತಿದ್ದಂತೆ ಉತ್ಸವ ಮೂರ್ತಿಯೊಂದಿಗೆ ದ್ವಾರ ಪ್ರವೇಶಿಸಿ ದರ್ಶನ ಪಡೆದರು.

ಕನ್ನಡದಲ್ಲೇ ಪ್ರಾರ್ಥನೆ, ಭಜನೆ ಮಾಡಿ, ಪೂಜೆ, ಪುನಸ್ಕಾರ ಗಳನ್ನು ನೆರವೇರಿಸಿದರು. ಉತ್ಸವ ಮೂರ್ತಿಗೆ ಪ್ರದಕ್ಷಿಣೆ ಹಾಕಿ, ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ನೇತೃತ್ವದ ತಂಡ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿತು.

ಭಕ್ತರಿಂದ ಭಜನೆ, ಭಗವದ್ಗೀತೆಯ ಪಠಣ, ನಾಮ ಸಂಕೀರ್ತನೆ ಜರುಗಿತು. ಸಹಸ್ರಾರು ಭಕ್ತರು ರಾಮನಾಮ ಲಿಪಿ ಬರೆದು ರಾಮನಾಮ ಲಿಪಿ ಮಂಟಪಕ್ಕೆ ಸಮರ್ಪಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಬೆಳಗಿನಿಂದ ರಾತ್ರಿಯವರೆಗೆ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ವೈಕುಂಠ ದ್ವಾರವನ್ನು ಪ್ರವೇಶಿಸಿ ಸಂಭ್ರಮಿಸಿದರು.