ಸಾರಾಂಶ
ದೊಡ್ಡಬಳ್ಳಾಪುರ: ವೈಕುಂಠ ಏಕಾದಶಿ ಅಂಗವಾಗಿ ಶುಕ್ರವಾರ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ದಿನವಿಡೀ ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ಶ್ರೀ ಸ್ವಾಮಿಯ ದರ್ಶನ ಪಡೆದರು.
ನಗರದ ಮತ್ತು ತಾಲೂಕಿನ ಪ್ರಮುಖ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ಸಹಸ್ರಾರು ಭಕ್ತಾದಿಗಳು ಸಾಲುಗಟ್ಟಿ ನಿಂತು ವೈಕುಂಠ ದ್ವಾರದ ಮೂಲಕ ವಿಶೇಷ ದರ್ಶನ ಪಡೆದರು.ತೇರಿನಬೀದಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ವಜ್ರ ಕವಚಧಾರಣೆ ಹಾಗೂ ಪೂಜೆ ಹಮ್ಮಿಕೊಳ್ಳಲಾಗಿತ್ತು. ವೈಕುಂಠ ಏಕಾದಶಿ ಅಂಗವಾಗಿ ದೇವಾಲಯದಲ್ಲಿ ಸಂಭ್ರಮ ಮನೆ ಮಾಡಿತ್ತು.
ದೇವಾಲಯದಲ್ಲಿರುವ ಶ್ರೀಸ್ವಾಮಿಗೆ ವಿಶೇಷ ವಜ್ರಾಂಗಿ ಅಲಂಕಾರ ಮಾಡಲಾಗಿತ್ತು. ವಜ್ರಖಚಿತಆಭರಣಗಳಿಂದ ಶ್ರೀಸ್ವಾಮಿಯನ್ನು ಅಲಂಕರಿಸಿದ್ದ ದೃಶ್ಯ ಭಕ್ತಾದಿಗಳ ಆಕರ್ಷಣೆಗೆ ಪಾತ್ರವಾಯಿತು. ಲಕ್ಷ್ಮೀಪದ್ಮಾವತಿ ಸಹಿತ ಶ್ರೀವೆಂಕಟೇಶ್ವರ ಸ್ವಾಮಿಗೆ ಕೂಡ ವಿಶೇಷ ಪೂಜಾಲಂಕಾರಗಳು ನಡೆದವು. ಬೆಳಗಿನ ಜಾವ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ಸಾವಿರಾರು ಜನ ಆಗಮಿಸಿದ್ದರು. ಭಕ್ತರು ಸರದಿಯಲ್ಲಿ ಗಂಟೆಗಟ್ಟಲೆ ನಿಂತು ದೇವರ ದರ್ಶನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿಶೇಷ ದರ್ಶನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಎಲ್ಲ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.
ತೂಬಗೆರೆಯಲ್ಲಿ ಸಂಭ್ರಮ:ತಾಲೂಕಿನ ತೂಬಗೆರೆ ಗ್ರಾಮದಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷಾಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ, ಧಾರ್ಮಿಕ ಪಠಣ ಅನೇಕ ಕಾರ್‍ಯಕ್ರಮಗಳು ನಡೆಯಿತು.
ಕಾಡನೂರಿನಲ್ಲಿ ವೈಕುಂಠ ಏಕಾದಶಿ:ತಾಲೂಕಿನ ಮತ್ತೊಂದು ಇತಿಹಾಸ ಪ್ರಸಿದ್ದ ದೇವಾಲಯ ಎನಿಸಿರುವ ಕಾಡನೂರು ಗ್ರಾಮದ ಚನ್ನಕೇಶವ ದೇವಾಲಯದಲ್ಲೂ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ, ಅಲಂಕಾರ ನಡೆದವು. ಭಕ್ತಾದಿಗಳು ನಿರಂತರವಾಗಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಕಿಲ್ಲೆ ವೇಣುಗೋಪಾಲ ದೇಗುಲ:ಇಲ್ಲಿನ ಇತಿಹಾಸ ಪ್ರಸಿದ್ದ ಕಿಲ್ಲೆ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವೆಂಕಟರಮಣಸ್ವಾಮಿಗೆ ವಜ್ರಾಂಗಿ ಅಲಂಕಾರ ಮಾಡಲಾಗಿತ್ತು. ವೇಣುಗೋಪಾಲ ಸ್ವಾಮಿ ಮೂಲ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ, ವೈಕುಂಠ ದ್ವಾರ ದರ್ಶನ, ಉಯ್ಯಾಲೋತ್ಸವ ನಡೆಯಿತು.
ವಡ್ಡರಹಳ್ಳಿ ತಿರುಮಲ ದೇಗುಲ:ತಾಲೂಕಿನ ವಡ್ಡರಹಳ್ಳಿ ತಿರುಮಲ ದೇವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೊಡ್ಡಬಳ್ಳಾಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದರು.
ಉಳಿದಂತೆ ನಗರದ ವೆಂಕಟರಮಣ ಸ್ವಾಮಿ, ರಂಗನಾಥಸ್ವಾಮಿ, ವೇಣುಗೋಪಾಲ ಸ್ವಾಮಿ, ನರಸಿಂಹಸ್ವಾಮಿ, ವೈಕುಂಠ ಜನಾರ್ಧನಸ್ವಾಮಿ ದೇವಾಲಯಗಳಲ್ಲಿ, ರಂಗಪ್ಪ ವೃತ್ತದಲ್ಲಿರುವ ಶಿರಡಿಸಾಯಿಬಾಬಾ ಮಂದಿರ, ನೆಲದಾಂಜನೇಯಸ್ವಾಮಿ ದೇವಾಲಯ, ಅರಳುಮಲ್ಲಿಗೆ ಬಾಗಿಲು ಆಂಜನೇಯ ದೇವಾಲಯ ಸೇರಿದಂತೆ ಹಲವೆಡೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದರೆ ಸಾಕ್ಷಾತ್ ವೈಕುಂಠ ದರ್ಶನವೇ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿಂದ ಭಕ್ತಾದಿಗಳು ಉತ್ತರಾಭಿಮುಖದ ವೈಕುಂಠ ದ್ವಾರದ ಮೂಲಕ ಹಾದು ದೇವರ ದರ್ಶನ ಪಡೆದರು.
10ಕೆಡಿಬಿಪಿ1-ದೊಡ್ಡಬಳ್ಳಾಪುರದ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಆಕರ್ಷಕ ವಜ್ರಾಂಗಿ ಅಲಂಕಾರ.
10ಕೆಡಿಬಿಪಿ2-ದೊಡ್ಡಬಳ್ಳಾಪುರದ ಕಿಲ್ಲೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ವೈಕುಂಠ
ಏಕಾದಶಿ ಅಂಗವಾಗಿ ವಜ್ರಾಂಗಿ ಅಲಂಕಾರ.10ಕೆಡಿಬಿಪಿ3-
ದೊಡ್ಡಬಳ್ಳಾಪುರದ ನಾಗರಕೆರೆ ನಾರಾಯಣ ಮಂದಿರದಲ್ಲಿ ವಿಶೇಷಾಲಂಕಾರ.10ಕೆಡಿಬಿಪಿ4-
ದೊಡ್ಡಬಳ್ಳಾಪುರದ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಸಿಂಗಾರ.10ಕೆಡಿಬಿಪಿ5-
ವಡ್ಡರಹಳ್ಳಿ ತಿರುಮಲ ದೇಗುಲದಲ್ಲಿ ದರ್ಶಕ್ಕೆ ವಿಶೇಷ ವ್ಯವಸ್ಥೆ.