ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿರ್ದೇಶನದಂತೆ ಡಿ.25ರಂದು ಜಿಲ್ಲೆಯಲ್ಲಿ ಸುಶಾಸನ ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ ಕುಮಾರ ನಾಯ್ಕ ಹೇಳಿದ್ದಾರೆ.

- ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ ಕುಮಾರ ನಾಯ್ಕ ಮಾಹಿತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿರ್ದೇಶನದಂತೆ ಡಿ.25ರಂದು ಜಿಲ್ಲೆಯಲ್ಲಿ ಸುಶಾಸನ ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ ಕುಮಾರ ನಾಯ್ಕ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಅಂಗವಾಗಿ ಡಿ.24ರ ಸಂಜೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದೀಪ ಬೆಳಗಿಸಲಾಗುತ್ತದೆ. 25ರಂದು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಹಾಗೂ ಹೆಬ್ಬಾಳ್ ಟೋಲ್‌ ಗೇಟ್ ಬಳಿ ಅಟಲಜೀ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಾಹನ ಚಾಲಕರಿಗೆ ಸಿಹಿ ವಿತರಿಸಲಾಗುವುದು. ಎಲ್ಲ ಮಂಡಲಗಳಲ್ಲಿ ಡಿ.25ರಿಂದ 31ರವರೆಗೆ ಅಟಲಜೀ ಜೀವನ ಮತ್ತು ಸಾಧನೆಗಳ ಉಪನ್ಯಾಸ ಏರ್ಪಡಿಸಲಾಗುವುದು. ಪಕ್ಷದ ಕಚೇರಿ, ಸ್ಥಳೀಯ ಸಂಸ್ಥೆಗಳ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಟಲಜೀ ಸ್ಮೃತಿ ಪ್ರದರ್ಶನ ಆಯೋಜಿಸಲಾಗುವುದು ಎಂದರು.

ಭಾರತರತ್ನ ವಾಜಪೇಯಿ ಪೋಖ್ರಾನ್ ಅಣುಪರೀಕ್ಷೆ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಸಮರ್ಥ ನೇತೃತ್ವ ವಹಿಸುವ ಜೊತೆಗೆ ಗ್ರಾಮ ಸಡಕ್ ಯೋಜನೆಯಂತಹ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದು ಭಾರತವನ್ನು 21ನೇ ಶತಮಾನದ ಮುನ್ನಲೆಗೆ ತಂದು ನಿಲ್ಲಿಸಿದ್ದರು. ಅವರ ಜೀವನ, ಸಾಧನೆಗಳನ್ನು ಸಾರುವ ನಿಟ್ಟಿನಲ್ಲಿ ವಾಜಪೇಯಿ ಜನ್ಮಶತಮಾನೋತ್ಸವ ವರ್ಷಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಟಲಜೀ ರಾಜಕೀಯ ಬದುಕು, ದೇಶಕ್ಕೆ ಕಲ್ಪಿಸಿದ ಮೂಲಸೌಕರ್ಯ, ವಿದೇಶಾಂಗ ನೀತಿ, ಜನಸಾಮಾನ್ಯರ ಬದುಕನ್ನು ಹಸನಾಗಿಸಲು ಕೈಗೊಂಡ ಪ್ರಮುಖ ಸುಧಾರಣೆ, ಕೊಡುಗೆಗಳನ್ನು ಸ್ಮರಿಸುವುದು, ಬೂತ್‌ನಿಂದ ರಾಷ್ಟ್ರಮಟ್ಟದವರೆಗೆ ಅಭಿಯಾನಕ್ಕೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಮೂಲಕ ಅಟಲಜೀ ಉದಾತ್ತ ಆದರ್ಶ, ಚಿಂತನೆಗಳನ್ನು ಸಂಘಟನೆಯ ಮುಂದಿನ ತಲೆಮಾರಿನ ಕಾರ್ಯಕರ್ತರಲ್ಲಿ ಬೇರೂರಿಸುವುದು, ದೇಶ ಮೊದಲು ಎಂಬ ಮೌಲ್ಯವನ್ನು ಎತ್ತಿ ಹಿಡಿದು, ವಿಕಸಿತ ಭಾರತದತ್ತ ನಾಗರಿಕರು ಮತ್ತು ಯುವಕರನ್ನು ಪ್ರೇರೇಪಿಸುವುದು ಅಭಿಮಾನದ ಉದ್ದೇಶ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ, ತಾರೇಶ ನಾಯ್ಕ, ಸಚಿನ್, ಆರ್.ಶಿವಾನಂದ, ನೆಲಹೊನ್ನೆ ಮಂಜುನಾಥ, ಕೊಟ್ರೇಶಗೌಡ, ತುಂಬಿಗೆರೆ ದಿನೇಶ, ಕೂಲಂಬಿ ಸಿದ್ದಲಿಂಗಪ್ಪ ಇದ್ದರು.

- - -

-24ಕೆಡಿವಿಜಿ37:

ದಾವಣಗೆರೆಯಲ್ಲಿ ವಾಜಪೇಯಿ ಜನ್ಮದಿನ ಪ್ರಯುಕ್ತ ಸುಶಾಶನ ದಿನ ಕಾರ್ಯಕ್ರಮ ಕುರಿತು ಅನಿಲ ಕುಮಾರ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.